ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿ: ಸಿಪಿಐ ಚಿಕ್ಕರಾಜ್ ಶೆಟ್ಟಿ,ರಾಮಪುರದಲ್ಲಿ ಅದ್ದೂರಿ ವಾಲಿಬಾಲ್ ಪಂದ್ಯಾವಳಿ: ವಿಜೇತರಿಗೆ ಬಹುಮಾನ ವಿತರಣೆ

Spread the love

ಹನೂರು: ಯುವಕರು ದುಶ್ಚಟಗಳು ಹಾಗೂ ಮಾದಕ ದ್ರವ್ಯ ಸೇವನೆಯಿಂದ ದೂರವಿದ್ದು, ಕ್ರೀಡೆಗಳತ್ತ ಗಮನ ಹರಿಸಿದರೆ ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ರಾಮಪುರ ವೃತ್ತ ನಿರೀಕ್ಷಕ ಚಿಕ್ಕರಾಜ್ ಶೆಟ್ಟಿ ಕಿವಿಮಾತು ಹೇಳಿದರು.

​ತಾಲೂಕಿನ ರಾಮಪುರ ಗ್ರಾಮದ ಇಂದಿರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಬೈಯ್ಯಮ್ಮ ತಾಯಿ ಹಾಗೂ ಆಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಯುವಕರು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವಲ್ಲಿ ಕ್ರೀಡೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಗಳ ಜೊತೆಗೆ ಶಿಕ್ಷಣಕ್ಕೂ ಸಮಾನ ಮಹತ್ವ ನೀಡಬೇಕು ಮತ್ತು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ವಿವಿಧ ಗ್ರಾಮಗಳಿಂದ ಆಗಮಿಸಿದ ಕ್ರೀಡಾಪಟುಗಳು ಕೇವಲ ಇಲ್ಲಿಗೆ ಸೀಮಿತವಾಗದೆ ಜಿಲ್ಲಾ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

​ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ಬೈಯ್ಯಮ್ಮ ತಾಯಿ ಹಾಗೂ ಆಂಜನೇಯ ಸ್ವಾಮಿ ಟ್ರಸ್ಟ್ ಅಧ್ಯಕ್ಷ ಮುನೇಶ್, ದೇವಸ್ಥಾನದ ಅಭಿವೃದ್ಧಿಯ ಜೊತೆಗೆ ಯುವಕರನ್ನು ಕ್ರೀಡಾ ಚಟುವಟಿಕೆಗಳ ಮೂಲಕ ಪ್ರೋತ್ಸಾಹಿಸುವ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಈ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿಜೇತ ತಂಡಗಳು:

ನಡೆದ ಜಿದ್ದಾಜಿದ್ದಿನ ಪಂದ್ಯಾವಳಿಯಲ್ಲಿ ಚಾಮರಾಜನಗರ ತಂಡ ಪ್ರಥಮ ಸ್ಥಾನದೊಂದಿಗೆ ೧೧,೦೦೦ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಪಾಳ್ಯ ಗ್ರಾಮದ ತಂಡಕ್ಕೆ ೭,೦೦೦ ರೂ. ಹಾಗೂ ತೃತೀಯ ಸ್ಥಾನ ಪಡೆದ ರಾಮಪುರ (ಬಾಹುಬಲಿ) ತಂಡಕ್ಕೆ ೫,೦೦೦ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.

​ಈ ಸಂದರ್ಭದಲ್ಲಿ ಉದ್ಯಮಿ ಸಂದೀಪ್, ಕಿಟ್ಟಪ್ಪ, ಕಾರ್ಯಕ್ರಮದ ಆಯೋಜಕರಾದ ಎಸ್. ಕುಮಾರ್, ಅಶೋಕ್, ಗುರು, ಶಿವು, ಗಣೇಶ್ ಹಾಗೂ ವಾಲಿಬಾಲ್ ಆಟಗಾರರು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.

ವರದಿ: ಕಾರ್ತಿಕ್ ಗೌಡ ಹನೂರು

Leave a Reply

Your email address will not be published. Required fields are marked *