​ಧಾರವಾಡದ ನೂತನ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಆರ್. ಅಧಿಕಾರ ಸ್ವೀಕಾರ

Spread the love

ಧಾರವಾಡ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಹಿರಿಯ ಐಎಎಸ್ ಅಧಿಕಾರಿ ಸ್ನೇಹಲ್ ಆರ್. ಅವರು ಬುಧವಾರ (ಫೆಬ್ರವರಿ 11) ಅಧಿಕಾರ ವಹಿಸಿಕೊಂಡರು. ಈ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಇವರು, ಇದೀಗ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ.

​ಕರ್ನಾಟಕ ಸರ್ಕಾರದ ರಾಷ್ಟ್ರೀಯ ಜೀವನೋಪಾಯ ಅಭಿಯಾನದ ನಿರ್ದೇಶಕರಾಗಿದ್ದ ಸ್ನೇಹಲ್ ಆರ್. ಅವರನ್ನು ಸರ್ಕಾರವು ಧಾರವಾಡ ಜಿಲ್ಲಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಈ ಮೊದಲು ಜಿಲ್ಲಾಧಿಕಾರಿಯಾಗಿದ್ದ ದಿವ್ಯ ಪ್ರಭು ಜಿ. ಆರ್. ಜೆ. ಅವರನ್ನು ರಾಜ್ಯ ಸರ್ಕಾರ ನಿನ್ನೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿ, ಇಂದು ಬೆಳಿಗ್ಗೆ ಸ್ನೇಹಲ್ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. 2017-18ರ ಅವಧಿಯಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕಾರ್ಯನಿರ್ವಹಿಸಿದ ಅನುಭವ ಇವರಿಗಿದ್ದು, ಜಿಲ್ಲೆಯ ಭೌಗೋಳಿಕ ಮತ್ತು ಆಡಳಿತಾತ್ಮಕ ವಿಚಾರಗಳ ಬಗ್ಗೆ ಅವರಿಗೆ ಅಪಾರ ಪರಿಚಯವಿದೆ.

​ನೂತನ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದ ಭುವನೇಶ ಪಾಟೀಲ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಗರೀಮಾ ಪವಾರ, ಐಎಎಸ್ ಪ್ರೊಬೇಷನರಿ ಅಧಿಕಾರಿ ರೀತಿಕಾ ವರ್ಮಾ ಹಾಗೂ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಪುಸ್ತಕಗಳನ್ನು ನೀಡುವ ಮೂಲಕ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಕೋರಿದರು.

​ಅಧಿಕಾರ ಸ್ವೀಕಾರದ ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದು ಶುಭ ಕೋರಿದರು.

Leave a Reply

Your email address will not be published. Required fields are marked *