ಶಾಲೆ ಆವರಣದಲ್ಲಿ ಆಘಾತಕಾರಿ ಘಟನೆ: ವಿರಾಜಪೇಟೆ ಶಾಲೆಯ 25ಕ್ಕೂ ಅಧಿಕ ಮಕ್ಕಳ ಮೇಲೆ ಜೇನು ದಾಳಿ; ಆಸ್ಪತ್ರೆಗೆ ದಾಖಲು

Spread the love

ವಿರಾಜಪೇಟೆ: ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ 25ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಜೇನು ಹಿಂಡು ಏಕಾಏಕಿ ದಾಳಿ ನಡೆಸಿದ್ದು, ಪ್ರದೇಶದಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಪ್ರತಿದಿನದಂತೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಬೆಳಗಿನ ಪ್ರಾರ್ಥನೆ ಮುಗಿಸಿದ್ದರು. ಬಿಸಿ ಹಾಲು ಪಡೆಯಲು ಸಾಲಿನಲ್ಲಿ ನಿಂತಿದ್ದ ವೇಳೆ, ಸಮೀಪದ ತೋಟದಿಂದ ಹಾರಿಬಂದ ಜೇನು ಹಿಂಡು ಮಕ್ಕಳು ಮತ್ತು ಶಿಕ್ಷಕರ ಮೇಲೆ ದಾಳಿ ಮಾಡಿತು. ಮಕ್ಕಳು ನೋವಿನಿಂದ ಚೀರಾಡುತ್ತಿದ್ದ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದರು. ಜೇನುಗಳನ್ನು ಓಡಿಸಿ, ಜೇನು ಕಡಿತಕ್ಕೆ ಒಳಗಾದ ಮಕ್ಕಳನ್ನು ತಕ್ಷಣವೇ ವಿರಾಜಪೇಟೆ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಕೆಲ ಶಿಕ್ಷಕರಿಗೂ ಜೇನು ಕಡಿತವಾಗಿದೆ.

ಶಾಲೆಯ ಮುಖ್ಯಶಿಕ್ಷಕಿ ಅನ್ನಮ್ಮ ಅವರು ಕೂಡ ಜೇನು ದಾಳಿಗೆ ಒಳಗಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ವಿಷಯ ತಿಳಿದ ಕೆಲ ಪೋಷಕರು ಆತಂಕದಿಂದ ಆಸ್ಪತ್ರೆಗೆ ಧಾವಿಸಿದ್ದು, ಮಕ್ಕಳಿಗೆ ಯಾವುದೇ ಗಂಭೀರ ತೊಂದರೆಗಳಿಲ್ಲ ಎಂದು ವೈದ್ಯರು ತಿಳಿಸಿದ ಬಳಿಕ ನಿಟ್ಟುಸಿರು ಬಿಟ್ಟಿದ್ದಾರೆ.

ಘಟನೆಯ ಕುರಿತು ಮಾಹಿತಿ ಪಡೆದ ವಿರಾಜಪೇಟೆ ನಗರ ಠಾಣೆ ಪೊಲೀಸರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೆ, ಘಟನೆಯನ್ನು ಕುರಿತು ಅಗತ್ಯ ಮಾಹಿತಿ ಪಡೆದು, ಶಾಲೆಯ ಸುತ್ತಮುತ್ತಲಿನ ಪ್ರದೇಶದಲ್ಲಿನ ಜೇನುಗೂಡುಗಳನ್ನು ತೆರವುಗೊಳಿಸುವ ಕುರಿತು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *