ವಿಷಯುಕ್ತ ಹೊಗೆ ನಿಯಂತ್ರಣಕ್ಕೆ ಆಗ್ರಹಿಸಿ ಶಿವಸೇನೆ ಪ್ರತಿಭಟನೆ

Spread the love

ಧಾರವಾಡ: ಧಾರವಾಡ ಹೊಸ ಯಲ್ಲಾಪೂರದ ಬಳಿಯಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡ ನಗರದ ವಿವಿಧ ಕಡೆಗಳಲ್ಲಿ ಹರಡಿಕೊಂಡು ಜನರು ಪರದಾಡುವ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಶಿವಸೇನೆ ಪಕ್ಷದ ಮುಖಂಡರು ಧಾರವಾಡ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಧಾರವಾಡ ಹೊಸ ಯಲ್ಲಾಪುರ ರುದ್ರಭೂಮಿಯ ಬಳಿಯ ಕಸ ವಿಲೇವಾರಿ ಘಟಕದ ಸುತ್ತಮುತ್ತಲಿನ ಟೋಲ್ ನಾಖಾ, ವಿದ್ಯಾಗಿರಿ, ಲಕ್ಷ್ಮೀ ನಗರ, ಜನ್ನತ್ ನಗರ, ಹೊಸ ಯಲ್ಲಾಪೂರ, ನವಲೂರ ಆಗಸಿ, ಯಾಲಕ್ಕಿ ಶೆಟ್ಟರ್ ಕಾಲೊನಿ, ಶಿವಾನಂದ ನಗರ, ಚಪ್ಪರ ಬಂದ್ ಕಾಲೊನಿ, ರಾಮನಗರ ಸುತ್ತಲಿನ ಪ್ರದೇಶದಲ್ಲಿನ ಜನರು ಆಗುತ್ತಿರುವ ತೊಂದರೆ ನಿವಾರಿಸಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿ ವರ್ಷ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ವಿಷಯುಕ್ತ ಹೊಗೆ ಧಾರವಾಡ ನಗರದ ವಿವಿಧ ಕಡೆಗಳಲ್ಲಿ ಹರಡಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಈ ಕುರಿತು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕದ ನಿರ್ವಹಣೆ ಮಾಡಬೇಕು. ಜೊತೆಗೆ ಕಸ ವಿಲೇವಾರಿ ಘಟಕವನ್ನು ನಗರದಿಂದ ದೂರ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕೆಂದು ಶಿವಸೇನೆ ಪಕ್ಷದ ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಿವಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ, ಜಿಲ್ಲಾಧ್ಯಕ್ಷ ಸಿದ್ಧಾರ್ಥ ಶಿವಶರಣ, ಭರತ್ ಸಾವಂತ್, ಆರತಿ ಪಾಟೀಲ, ಭಾರತಿ ಕದಂ, ಅಕ್ಷಯ ಕದಂ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *