
ಶಿಗ್ಗಾಂವಿ (ಹಾವೇರಿ ಜಿಲ್ಲೆ): ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ, ಕಾಡಿನಲ್ಲಿ ದೈಹಿಕ ಸಂಪರ್ಕ ಬೆಳೆಸಿ, ಅದರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಅಭಿಷೇಕ್ ಲಕ್ಷ್ಮಣಪ್ಪ ಲಮಾಣಿ ಮತ್ತು ಪ್ರವೀಣ ಲಮಾಣಿ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಯಶೋಧಾ ಒಂಟಗೋಡಿ ಅವರು ತಿಳಿಸಿದ್ದಾರೆ.
ಘಟನೆ ವಿವರ
ಪಟ್ಟಣದ ನರ್ಸಿಂಗ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್‌ನ ಪ್ರಥಮ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಮಮದಾಪುರ ಗ್ರಾಮದ ಅಭಿಷೇಕ್ ಲಕ್ಷ್ಮಣಪ್ಪ ಲಮಾಣಿ ಎಂಬಾತ ಕೆಲ ದಿನಗಳಿಂದ ಹಿಂಬಾಲಿಸುತ್ತಿದ್ದ.
ಸೆಪ್ಟೆಂಬರ್ 15ರ ಘಟನೆ: ಸೆ. 15ರಂದು ಮಧ್ಯಾಹ್ನ 3.30ರ ಸುಮಾರಿಗೆ ಬಾಲಕಿ ಕಾಲೇಜು ಮುಗಿಸಿ ಶಿಗ್ಗಾಂವಿಯಿಂದ ಕುನ್ನೂರಿಗೆ ಬಸ್ಸಿನಲ್ಲಿ ಬಂದು ಇಳಿದು, ಕುನ್ನೂರಿನ ಮೌಲಾನಾ ಆಜಾದ್ ಶಾಲೆಯ ಮಾರ್ಗವಾಗಿ ಮನೆಗೆ ಹೋಗುತ್ತಿದ್ದಳು. ಇದೇ ವೇಳೆ, ಆರೋಪಿ ಅಭಿಷೇಕ್ ಲಮಾಣಿ ತನ್ನ ಗೆಳೆಯ ಮಮದಾಪುರದ ಪ್ರವೀಣ ಲಮಾಣಿ ಜೊತೆ ಕಾರಿನಲ್ಲಿ ಬಂದು ಬಾಲಕಿಯ ಬಾಯಿಗೆ ಬಟ್ಟೆ ಕಟ್ಟಿ ಅಪಹರಿಸಿದ್ದಾನೆ.
ಕಾಡಿನಲ್ಲಿ ದೌರ್ಜನ್ಯ: ಅಪಹರಿಸಿದ ಬಾಲಕಿಯನ್ನು ಪಕ್ಕದ ಮಮದಾಪುರ ಕಾಡಿಗೆ ಕರೆದೊಯ್ದು, ಆಕೆ ವಿರೋಧದ ನಡುವೆಯೂ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇಷ್ಟೇ ಅಲ್ಲದೆ, ಸಂಪರ್ಕದ ವಿಡಿಯೋ ಮಾಡಿಟ್ಟುಕೊಂಡು, “ಇನ್ನು ಮುಂದೆ ಹೇಳಿದಂತೆ ಕೇಳದಿದ್ದರೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ” ಬೆದರಿಸಿದ್ದಾನೆ. ಬಳಿಕ 4.30 ಗಂಟೆ ಸುಮಾರಿಗೆ ಅಪಹರಿಸಿದ ಜಾಗಕ್ಕೆ ಇಳಿಸಿ ಹೋಗಿದ್ದಾನೆ.
ಪುನಃ ಕಿರುಕುಳ: ಇದಾದ ನಂತರ, ಸೆ. 17ರಂದು ರಾತ್ರಿ 10 ಗಂಟೆ ಆಸುಪಾಸಿನಲ್ಲಿ ಬಾಲಕಿಯನ್ನು ಪುನಃ ಹೆದರಿಸಿ ಹಿತ್ತಲಿಗೆ ಕರೆಸಿ, ಅಸಭ್ಯವಾಗಿ ವರ್ತಿಸಿದ್ದಾನೆ.
ಮಕ್ಕಳ ಸಹಾಯವಾಣಿ ರಕ್ಷಣೆ
ಆರೋಪಿ ಅಭಿಷೇಕ್ ಲಕ್ಷ್ಮಣಪ್ಪ ಲಮಾಣಿಯ ಕಿರುಕುಳ ತಾಳಲಾರದೆ ಮನನೊಂದ ಬಾಲಕಿ, ಕೊನೆಗೆ ಸೆಪ್ಟೆಂಬರ್ 24ರಂದು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ತನ್ನ ಮೇಲಾಗುತ್ತಿರುವ ದೌರ್ಜನ್ಯದ ಕುರಿತು ದೂರು ನೀಡಿದ್ದಾಳೆ. ದೂರಿನ ಮೇರೆಗೆ ಸಹಾಯವಾಣಿ ಅಧಿಕಾರಿಗಳು ಬಾಲಕಿಯನ್ನು ರಕ್ಷಿಸಿ, ಸದ್ಯ ಹಾವೇರಿಯ ಒನ್ ಸ್ಟಾಪ್ ಸೆಂಟರ್‌ನ ಅಭಿರಕ್ಷಣೆಯಲ್ಲಿ ಇರಿಸಿದ್ದಾರೆ.
ಈ ಘಟನೆ ಕುರಿತಂತೆ ತಡಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

