ಗಾಂಧಿಜೀ ನಡೆ-ನುಡಿಗಳಂತೆಯೇ ಬದುಕು ರೂಪಿಸಿಕೊಳ್ಳಿ: ಜಿ ಪಂ ಸಿಇಒ:ಭುವನೇಶ ಪಾಟೀಲ

Spread the love

ಧಾರವಾಡ: ಮಹಾತ್ಮ ಗಾಂಧೀಜಿಯವರು ತಮ್ಮ ಬದುಕಿನಲ್ಲಿ ನುಡಿದಂತೆ ನಡೆದು, ನಡೆದಂತೆ ನುಡಿದ ಆದರ್ಶ ವ್ಯಕ್ತಿತ್ವ. ಅವರ ಸ್ಮರಣೆಯ ಜೊತೆಗೆ, ಅವರ ಜೀವನ ಸಂದೇಶಗಳು ಮತ್ತು ಸಂಸ್ಕಾರಗಳನ್ನು ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ಬಾ ಪೂಜಿ ಪ್ರಬಂಧ ಸ್ಪರ್ಧೆ’ಯ ಜಿಲ್ಲಾ ಮಟ್ಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ: ಗಾಂಧೀಜಿ ಅವರದ್ದು ಸೂರ್ಯ-ಚಂದ್ರರಿರುವವರೆಗೂ ಸ್ಮರಿಸುವಂತಹ ವ್ಯಕ್ತಿತ್ವ. ಅವರು ತಮ್ಮನ್ನು ತಾವು ಸ್ವಾತಂತ್ರ್ಯ ಚಳುವಳಿಗೆ ಅರ್ಪಿಸಿಕೊಂಡು ಕೊನೆಯವರೆಗೂ ಆದರ್ಶವಾಗಿ ಉಳಿದರು. ಅವರ ಜೀವನ ಚರಿತ್ರೆ, ಸಂದೇಶಗಳು ಹಾಗೂ ನೀತಿ ಬೋಧನೆಗಳು ಇಂದಿನ ಯುವಕರಿಗೆ ಸ್ಪೂರ್ತಿದಾಯಕ ಮತ್ತು ಮಾರ್ಗದರ್ಶಿಯಾಗಬೇಕು ಎಂದು ಪಾಟೀಲ ತಿಳಿಸಿದರು. ಸತ್ಯ, ಅಹಿಂಸೆ ಮತ್ತು ಅಹಿಂಸಾತ್ಮಕ ಬದುಕಿನ ಕುರಿತು ಗಾಂಧೀಜಿ ಮಾಡಿದ ಪ್ರಯೋಗಗಳು ಇಂದಿಗೂ ಪ್ರಸ್ತುತ ಎಂದು ಅವರು ಹೇಳಿದರು.

ತ್ಯಾಗಮಯಿ ಬದುಕು ಆದರ್ಶ
ಗಾಂಧೀಜಿಯವರ ಜೀವನದ ಬಗ್ಗೆ ಬರೆಯುವುದು ಸುಲಭದ ಕೆಲಸವಲ್ಲ. ಅವರ ತ್ಯಾಗಮಯಿ ಜೀವನ ಎಲ್ಲರಿಗೂ ಮಾದರಿಯಾಗಿದೆ. ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಚಿಂತನೆಯನ್ನು ಪ್ರಚೋದಿಸಿ, ದೇಶದ ಇತಿಹಾಸ ಮತ್ತು ಮಹಾನ್ ನಾಯಕರ ಬಗ್ಗೆ ಅರಿವು ಮೂಡಿಸುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಶಿವಾನಂದ ಶೆಟ್ಟರ, “ಸ್ವಾತಂತ್ರ್ಯ ತ್ಯಾಗ-ಬಲಿದಾನಗಳಿಂದ ಬಂದಿದೆ, ಆದ್ದರಿಂದ ಜೀವನದಲ್ಲಿ ಪರಿಶ್ರಮ ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಇದೇ ವೇಳೆ, ಹೋರಾಟಗಾರ ವಿರೂಪಾಕ್ಷಗೌಡ ಪಾಟೀಲ, ಗಾಂಧೀಜಿಯವರು ಸತ್ಯಾಗ್ರಹ, ಅಹಿಂಸೆ ಮತ್ತು ಅಸಹಕಾರ ಚಳುವಳಿಗಳ ಮೂಲಕ ಬ್ರಿಟಿಷರಿಂದ ದೇಶವನ್ನು ಮುಕ್ತಗೊಳಿಸಲು ಶ್ರಮಿಸಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬಾಪೂಜಿ ಪ್ರಬಂಧ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ ಡಾ. ಸರಸ್ವತಿದೇವಿ ಭಗವತಿ, ಡಾ. ಶ್ರೀಧರ ಹೆಗಡೆ ಭದ್ರನ್ ಮತ್ತು ಡಾ. ರೇಣುಕಾ ಅಮಲಝರಿ ಅವರನ್ನು ಸಿಇಓ ಭುವನೇಶ ಪಾಟೀಲ ಅಭಿನಂದಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ಸ್ವಾಗತಿಸಿದರು. ಡಾ. ಸರಸ್ವತಿದೇವಿ ಭಗವತಿ ಕಾರ್ಯಕ್ರಮ ನಿರೂಪಿಸಿದರು ಹಾಗೂ ಶ್ರೀಧರ ಹೆಗಡೆ ವಂದಿಸಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಶುವೈದ್ಯಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *