
ಸಮಗ್ರ ಕನ್ನಡಿಗರು ಹೆಮ್ಮೆಪಡುವ ಕ್ಷಣ: ಸಿಎಂ ಸಿದ್ದರಾಮಯ್ಯ
25 ತಿಂಗಳಲ್ಲಿ 504 ಕೋಟಿಗೂ ಅಧಿಕ ಮಹಿಳಾ ಪ್ರಯಾಣಿಕರ ಉಚಿತ ಸಂಚಾರದ ದಾಖಲೆ
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಇದೀಗ International Book of Records – World Record of Excellence ಗೆ ಸೇರ್ಪಡೆಗೊಂಡು ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಇದು ಸಮಸ್ತ ಕನ್ನಡಿಗರು ಹೆಮ್ಮೆ ಪಡುವ ಕ್ಷಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಈ ಕುರಿತು ಟ್ವಿಟರ್ (ಎಕ್ಸ್) ಮೂಲಕ ಸಂತಸ ಹಂಚಿಕೊಂಡಿರುವ ಮುಖ್ಯಮಂತ್ರಿಗಳು, ಶಕ್ತಿ ಯೋಜನೆಯ ಸಾಧನೆಗೆ ಶ್ರಮಿಸಿದ ಸಾರಿಗೆ ಸಚಿವರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ದಾಖಲೆಯ ಪ್ರಯಾಣಿಕರ ಸಂಖ್ಯೆ
ಶಕ್ತಿ ಯೋಜನೆಯು ಚಾಲನೆಗೊಂಡ ದಿನದಿಂದ (ಜೂನ್ 11, 2023) ಜುಲೈ 25, 2025ರ ಅವಧಿಯಲ್ಲಿ ರಾಜ್ಯದ ಸಾರಿಗೆ ನಿಗಮದ ಬಸ್ಸುಗಳಲ್ಲಿ 504 ಕೋಟಿ 90 ಲಕ್ಷಕ್ಕೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಈ ಬೃಹತ್ ಸಾಧನೆಗಾಗಿ ಶಕ್ತಿ ಯೋಜನೆಯು ಈಗಾಗಲೇ ಪ್ರತಿಷ್ಠಿತ “Golden Book of World Records” ನಲ್ಲಿ ದಾಖಲಾಗಿದೆ. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದು, ವಿಶ್ವ ದಾಖಲೆ ಬರೆದಿದೆ.
ಮಹಿಳಾ ಸಬಲೀಕರಣದ ಹೆಜ್ಜೆ
ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ ಯೋಜನೆಯು ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿದೆ. ಈ ಯೋಜನೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗದಲ್ಲಿ ತೊಡಗಿಕೊಂಡಿದ್ದು, ಇದರಿಂದ ರಾಜ್ಯದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸ್ತ್ರೀ ಸಬಲೀಕರಣದ ಈ ಮಹತ್ವದ ಹೆಜ್ಜೆಯಲ್ಲಿ ಸರ್ಕಾರದೊಂದಿಗೆ ಜೊತೆಯಾಗಿರುವ ಎಲ್ಲಾ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆಯ ಸಾಧನೆಯ ಶ್ರೇಯ ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಇಲಾಖೆಯ ಎಲ್ಲಾ ಅಧಿಕಾರಿಗಳು, ಮತ್ತು ಸಿಬ್ಬಂದಿ ವರ್ಗಕ್ಕೂ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

