

ಹುಬ್ಬಳ್ಳಿ: ಸೇವಾ ಭಾರತಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿದ್ಯಾ ವಿಕಾಸ ಪ್ರಕಲ್ಪದ ಶಿಕ್ಷಕಿಯರ ಅಭ್ಯಾಸ ವರ್ಗವನ್ನು ಭಾನುವಾರ ಕೇಶ್ವಾಪುರದ ಸೇವಾ ಸದನದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಗಳ 70 ಕೇಂದ್ರಗಳಿಂದ ಒಟ್ಟು 82 ಶಿಕ್ಷಕಿಯರು ಈ ವರ್ಗದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಾಂತ ಸಂಘಟನಾ ಕಾರ್ಯದರ್ಶಿ ಶಂಕರ ಗುಮಾಸ್ತೆ ಅವರು ‘ಸುಪೋಷಿತ ಭಾರತ ಅಭಿಯಾನ 2025’ರ ಬಗ್ಗೆ ವಿವರವಾದ ಮಾಹಿತಿ ನೀಡಿದರು. ನಮ್ಮ ಮನೆಪಾಠ ಕೇಂದ್ರಗಳಲ್ಲಿರುವ ಮಕ್ಕಳು ಮತ್ತು ಪಾಲಕರ ಜೊತೆಗೆ, ಬಸ್ತಿಯ ಮಕ್ಕಳನ್ನು ಹಾಗೂ ಅವರ ಪಾಲಕರನ್ನು ಸೇರಿಸಿ ಪೌಷ್ಟಿಕ ಆಹಾರದ ಕುರಿತು ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ವಿದ್ಯಾ ವಿಕಾಸ ಪ್ರಕಲ್ಪ ಸಮಿತಿಯ ಪ್ರಾಂತ ಅಧ್ಯಕ್ಷೆ ಭಾರತಿ ನಂದಕುಮಾರ್ ಅವರು ಕೇಂದ್ರಗಳಲ್ಲಿ ನಡೆದ ಚಟುವಟಿಕೆಗಳ ವರದಿಯನ್ನು ಪಡೆದುಕೊಂಡರು. ನಂತರ, ರೋಟರಿ ಕ್ಲಬ್ ಹುಬ್ಬಳ್ಳಿ ಸೆಂಟ್ರಲ್ನ ಜ್ಯೋತಿ ನಡಕಟ್ಟಿ ಮತ್ತು ಅವರ ತಂಡದ ಸದಸ್ಯರು ನವರಾತ್ರಿ ಹಾಗೂ ದೀಪಾವಳಿ ಹಬ್ಬಗಳಿಗಾಗಿ ಮಣ್ಣಿನ ಹಣತೆಗಳನ್ನು ಅಲಂಕರಿಸುವ ವಿಧಾನವನ್ನು ಶಿಕ್ಷಕಿಯರಿಗೆ ಕಲಿಸಿಕೊಟ್ಟರು.
ಕಾರ್ಯಕ್ರಮದ ಯಶಸ್ಸಿಗೆ ಗೋಪಾಲ ಮಗಜಿಕೊಂಡಿ, ಶ್ರೀನಿವಾಸ ವಂಟಮನಿ, ಪೂಜಾ ಲಾತುಸ್ಕರ, ವೀಣಾ ಹೂಗಾರ, ಕೇತನಾ ನಂದಿಗೊನ, ಮಲ್ಲಮ್ಮ ವಾಲ್ಮೀಕಿ ಮತ್ತು ಶಿಲ್ಪಾ ಭಾವುಟೆ ಸೇರಿದಂತೆ ಹಲವರು ಸಹಕರಿಸಿದರು.

