ಆಹಾರ ಭದ್ರತೆಗೆ ಬೀಜೋತ್ಪಾದನೆ ಅಗತ್ಯ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್

Spread the love

ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಭವ್ಯ ಕೃಷಿ ಮೇಳಕ್ಕೆ ಭಾನುವಾರ ರಾಜ್ಯಪಾಲ ಥಾವರಚಂದ್ ಗೆಲ್ಲೋಟ್ ಅವರು ಭೇಟಿ ನೀಡಿ ಮೇಳಕ್ಕೆ ಹೊಸ ಮೆರುಗು ತಂದರು. ಈ ಸಮಯದಲ್ಲಿ ಅವರು “ಉತ್ಕೃಷ್ಟ ಗುಣಮಟ್ಟದ ಬೀಜಗಳು ದೇಶದ ಆಹಾರ ಭದ್ರತೆಗೆ ಅತ್ಯಗತ್ಯ. ಅನ್ನದಾತರ ಶ್ರಮ ಮತ್ತು ಆಧುನಿಕ ತಂತ್ರಜ್ಞಾನಗಳು ಒಟ್ಟಾಗಿ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಕೊಂಡೊಯ್ಯಲು ಸಹಕಾರಿ” ಎಂದು ಹೇಳಿದರು.

ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ಅಗತ್ಯ: ರಾಜ್ಯಪಾಲರ ಕರೆ
ಬೀಜ ಮೇಳವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ದ ಕನಸನ್ನು ಸಾಕಾರಗೊಳಿಸಲು ಕೃಷಿ ಕ್ಷೇತ್ರ ಮಹತ್ವದ ಪಾತ್ರ ವಹಿಸಲಿದೆ ಎಂದರು. ಪ್ರಸ್ತುತ ಜಾಗತಿಕ ಬೀಜೋತ್ಪಾದನೆಯಲ್ಲಿ ಭಾರತದ ಪಾಲು ಕೇವಲ ಶೇ.6 ರಷ್ಟಿದೆ. ಇದನ್ನು ಹೆಚ್ಚಿಸಲು ಮತ್ತು ದೇಶದ ಆರ್ಥಿಕತೆಗೆ ಸಿಂಹಪಾಲು ನೀಡುವ ಕೃಷಿ ವಲಯವನ್ನು ಬಲಪಡಿಸಲು ರೈತರು ಮತ್ತು ವಿಜ್ಞಾನಿಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಫಲಪುಷ್ಪ ಉದ್ಯಮದ ಕುರಿತು ಮಾತನಾಡಿದ ಅವರು, ಈ ವಲಯವು ದೇಶದ ಆರ್ಥಿಕ ಬೆಳವಣಿಗೆಗೆ ಅಪಾರ ಅವಕಾಶಗಳನ್ನು ಒದಗಿಸಿದೆ. ಇದು ರೈತರಿಗೆ ಕೇವಲ ಆಹಾರ ಭದ್ರತೆ ಮಾತ್ರವಲ್ಲದೆ, ಒಂದು ಲಾಭದಾಯಕ ಉದ್ಯಮವಾಗಿಯೂ ಬೆಳೆಯಲಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ರೈತರು ಫಲಪುಷ್ಪ ಉದ್ಯಮವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ರೈತರು ಹಾಗೂ ವಿಜ್ಞಾನಿಗಳ ನಡುವೆ ಸಂವಾದಕ್ಕೆ ವೇದಿಕೆ
ಕೃಷಿ ಮೇಳವು ರೈತರು ಮತ್ತು ವಿಜ್ಞಾನಿಗಳ ನಡುವೆ ನೇರ ಸಂವಾದಕ್ಕೆ ಒಂದು ವೇದಿಕೆಯಾಗಿದೆ. ಇಲ್ಲಿ ಲಭ್ಯವಿರುವ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜ್ಯಪಾಲರು ಹೇಳಿದರು. ವಿಶ್ವಮಟ್ಟದಲ್ಲಿ ಧಾನ್ಯಗಳ ಉತ್ಪಾದನೆ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೆಲಸಗಳು ಶ್ಲಾಘನೀಯ. ಇದು ರಾಜ್ಯದ ಇತರ ಕೃಷಿ ವಿಶ್ವವಿದ್ಯಾಲಯಗಳಿಗೂ ಸ್ಫೂರ್ತಿ ನೀಡುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಅವರು ಮಾತನಾಡಿ, “ಭಾರತವು ಆಹಾರ ಸ್ವಾವಲಂಬನೆ ಸಾಧಿಸಲು ಬೀಜ ಭದ್ರತೆ ಮೊದಲು ಅಗತ್ಯ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಬೀಜೋತ್ಪಾದನೆ ನಿರ್ಣಾಯಕ ಪಾತ್ರ ವಹಿಸಲಿದೆ. ರೈತರು ಬೀಜೋತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕು” ಎಂದು ಹೇಳಿದರು.

ಈ ಸಂದರ್ಭದಲ್ಲಿ, ಉತ್ತಮ ಬೀಜೋತ್ಪಾದನೆಗಾಗಿ ಶ್ರಮಿಸಿದ ಮಂಜುಳಾ ಕಾಮರಡ್ಡಿ, ಶಿವಪ್ಪಗಟ್ಟಿ, ಹಾಗೂ ಅಶೋಕ ಮತ್ತಿಹಳ್ಳಿ ಅವರಿಗೆ ‘ಉತ್ತಮ ಬೀಜೋತ್ಪಾದನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ, ಪಾರ್ವತಿ ಕುರ್ಲೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *