
ಶ್ರೀದೇವಿ ಎಂ. ಜಿ. ಗ್ರಂಥಪಾಲಕರು ಐ.ಬಿ.ಎಂ. ಆರ್. ಕಾಲೇಜ್ ಹುಬ್ಬಳ್ಳಿ ಇವರಿಂದ ಡಾ: ಭಾರತೀಯ ಗ್ರಂಥಾಲಯದ ಪಿತಾಮಹ ಡಾ. ಎಸ್ ಆರ್ ರಂಗನಾಥ ಅವರ ಕುರಿತು ವಿಷೇಶ ಲೇಖನ
ಹುಬ್ಬಳ್ಳಿ: ಭಾರತೀಯ ಗ್ರಂಥಾಲಯ ವಿಜ್ಞಾನದ ಪಿತಾಮಹ ಎಂದು ಪ್ರಸಿದ್ಧರಾದ ಡಾ. ಶಿವಾಲಿ ರಾಮಮೃತ ರಂಗನಾಥನ್ ಅವರ ಜನ್ಮದಿನವಾದ ಆಗಸ್ಟ್ 12 ಅನ್ನು ದೇಶಾದ್ಯಂತ ರಾಷ್ಟ್ರೀಯ ಗ್ರಂಥಪಾಲಕರ ದಿನವನ್ನಾಗಿ ಆಚರಿಸಲಾಗುವದು.
ಗ್ರಂಥಪಾಲಕರ ಅಮೂಲ್ಯ ಕೊಡುಗೆಗಳನ್ನು ಮತ್ತು ಸಮಾಜದಲ್ಲಿ ಅವರ ಪಾತ್ರದ ಮಹತ್ವವನ್ನು ಸ್ಮರಿಸಲು ಈ ದಿನವನ್ನು ಸಮರ್ಪಿಸಲಾಗಿದೆ.
ತಮಿಳುನಾಡಿನ ಶಿಯಾಲಿಯಲ್ಲಿ 1892ರ ಆಗಸ್ಟ್ 9ರಂದು ಜನಿಸಿದ ರಂಗನಾಥನ್ ಅವರು, ತಮ್ಮ ವೃತ್ತಿಜೀವನವನ್ನು ಗಣಿತ ಪ್ರಾಧ್ಯಾಪಕರಾಗಿ ಪ್ರಾರಂಭಿಸಿದರು. ನಂತರ, ಗ್ರಂಥಪಾಲಕರ ಹುದ್ದೆಯನ್ನು ಸ್ವೀಕರಿಸಿ, ಗ್ರಂಥಾಲಯ ವಿಜ್ಞಾನದ ಅಭಿವೃದ್ಧಿಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಅವರ ಅತ್ಯಂತ ಮಹತ್ವದ ಕೊಡುಗೆಗಳಲ್ಲಿ, ಗ್ರಂಥಾಲಯ ವಿಜ್ಞಾನದ ಐದು ಸೂತ್ರಗಳು ಇಂದಿಗೂ ಪ್ರಸ್ತುತವಾಗಿವೆ.
ಈ ಸೂತ್ರಗಳು ಹೀಗಿವೆ:
- ಗ್ರಂಥಗಳು ಉಪಯೋಗಕ್ಕಾಗಿವೆ.
- ಪ್ರತಿಯೊಂದು ಓದುಗನಿಗೂ ಒಂದು ಗ್ರಂಥವಿದೆ.
- ಪ್ರತಿಯೊಂದು ಗ್ರಂಥಕ್ಕೂ ಒಬ್ಬ ಓದುಗನಿರುತ್ತಾನೆ.
- ಓದುಗರ ಸಮಯವನ್ನು ಉಳಿಸಬೇಕು.
- ಗ್ರಂಥಾಲಯವು ನಿತ್ಯ ಬೆಳೆಯುವ ಶಿಶು.
ಈ ಐದು ಸೂತ್ರಗಳು ಗ್ರಂಥಾಲಯಗಳ ಕಾರ್ಯನಿರ್ವಹಣೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವು. ಇದರ ಜೊತೆಗೆ, ಅವರು ‘ಕಾಲನ್ ಕ್ಲಾಸಿಫಿಕೇಷನ್’ ಎಂಬ ಗ್ರಂಥಗಳ ವರ್ಗೀಕರಣ ಪದ್ಧತಿಯನ್ನು ಅಭಿವೃದ್ಧಿಪಡಿಸಿದರು, ಇದು ಇಂದಿಗೂ ಅನೇಕ ಗ್ರಂಥಾಲಯಗಳಲ್ಲಿ ಬಳಕೆಯಲ್ಲಿದೆ.
ಅವರ ಈ ಮಹತ್ತರ ಸಾಧನೆಗಳನ್ನು ಗುರುತಿಸಿ, ರಂಗನಾಥನ್ ಅವರಿಗೆ ಅನೇಕ ಗೌರವಗಳು ಮತ್ತು ಪ್ರಶಸ್ತಿಗಳು ಸಂದಿವೆ. 1935ರಲ್ಲಿ ಬ್ರಿಟಿಷ್ ಸರ್ಕಾರದಿಂದ ‘ರಾವ್ ಸಾಹೇಬ್’ ಬಿರುದು, 1957ರಲ್ಲಿ ಭಾರತ ಸರ್ಕಾರದಿಂದ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿ ಮತ್ತು 1970ರಲ್ಲಿ ಅಮೆರಿಕದ ‘ಮಾರ್ಗರೇಟ್ ಮನ್’ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಡಾ. ಎಸ್.ಆರ್. ರಂಗನಾಥನ್ ಅವರ ಪ್ರಯತ್ನಗಳು ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ಗ್ರಂಥಾಲಯಗಳ ಸ್ವರೂಪ ಮತ್ತು ಕಾರ್ಯನಿರ್ವಹಣೆಯನ್ನು ಬದಲಾಯಿಸಿದವು. ಅವರು ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಸದಾ ಸ್ಮರಣೀಯರು.

