ಭಕ್ತರಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಡಿಪೋ ಮ್ಯಾನೇಜರ್‌ಗಳಿಗೆ ಮನವಿ: ಸತೀಶ್ ಕೊಬ್ಬಯ್ಯನವರ ಭರವಸೆ

Spread the love

ಕುಂದಗೋಳ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳ ತಾಲೂಕು ನೂತನ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಸತೀಶ್ ಕೊಬ್ಬಯ್ಯನವರ ಅವರು ಭಾನುವಾರ ತಾಲೂಕಿನ ಗುಡಗೇರಿ ಗ್ರಾಮದ ಶ್ರೀ ದ್ಯಾಮವ್ವ ದೇವಿಯ ಸನ್ನಿಧಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ದೇವಿಯ ದರ್ಶನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಸತೀಶ್ ಕೊಬ್ಬಯ್ಯನವರ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ‘ಶಕ್ತಿ’ ಯೋಜನೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದಿನನಿತ್ಯ ಲಕ್ಷಾಂತರ ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಪ್ರಸಿದ್ಧಿ ಪಡೆದಿರುವ ಗುಡಗೇರಿ ದ್ಯಾಮವ್ವ ದೇವಿಯ ದರ್ಶನಕ್ಕಾಗಿ ರಾಜ್ಯ ಮತ್ತು ಹೊರ ರಾಜ್ಯದಿಂದಲೂ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದರೂ, ಅವರಿಗೆ ಸರಿಯಾದ ಬಸ್ ಸೌಲಭ್ಯ ಇಲ್ಲದೇ ತೊಂದರೆಯಾಗುತ್ತಿದೆ ಎಂದು ಗಮನ ಸೆಳೆದರು.

ಪ್ರಸ್ತುತ, ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ ಕಾರ್ಯವು ಪ್ರಗತಿಯಲ್ಲಿದೆ. ಆದರೂ, ಮುಂಬರುವ ನವರಾತ್ರಿಯ ಕೊನೆಯ ಮೂರು ದಿನಗಳಲ್ಲಿ ಸಾವಿರಾರು ಭಕ್ತಾದಿಗಳು ಬರುವ ನಿರೀಕ್ಷೆ ಇರುವುದರಿಂದ, ಲಕ್ಷ್ಮೇಶ್ವರ ಹಾಗೂ ಹುಬ್ಬಳ್ಳಿಯಿಂದ ಕೂಡಲೇ ಹೆಚ್ಚಿನ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ ಡಿಪೋ ಮ್ಯಾನೇಜರ್‌ಗಳಿಗೆ ಮನವಿ ಮಾಡುವುದಾಗಿ ಅವರು ಭರವಸೆ ನೀಡಿದರು. ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಇದಕ್ಕೂ ಮುನ್ನ, ತಾಲೂಕು ಗ್ರಾಮೀಣ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಜಿ.ಪಂ. ಸದಸ್ಯರಾದ ವೆಂಕನಗೌಡ ಹಿರೇಗೌಡ್ರ ಅವರ ಸ್ವಗೃಹದಲ್ಲಿ ನೂತನ ತಾಲೂಕು ಪಂಚ ಗ್ಯಾರಂಟಿ ಅಧ್ಯಕ್ಷ ಮತ್ತು ಸದಸ್ಯರನ್ನು ಪಕ್ಷದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕಿ ಕುಸುಮಾವತಿ ಶಿವಳ್ಳಿ, ಮಾಜಿ ಜಿಲ್ಲಾ ಪಂ. ಸದಸ್ಯೆ ಪ್ರೇಮಾ ಕೊಬ್ಬಯ್ಯನವರ, ನೂತನ ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಸೋಮಲಿಂಗಪ್ಪ ಹೊಸಮನಿ, ದಯಾನಂದ ಕುಂದೂರ, ವ್ಹಿ.ಎನ್. ಹಾಲಿ, ಸಕ್ರಪ್ಪ ಲಮಾಣಿ, ರಾಜು ಪಾಟೀಲ್, ಮಂಜುನಾಥ ಗದಗಿನಮಠ, ವಿರುಪಾಕ್ಷ ಹಂಚಿನಾಳ ಹಾಗೂ ಇತರೆ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *