ಹಾವೇರಿ:ಕಡರನಾಯ್ಕನಹಳ್ಳಿ: ತುಂಗಭದ್ರಾ ನದಿ ಪ್ರವಾಹಕ್ಕೆ ಉಕ್ಕಡಗಾತ್ರಿ ಜಲಾವೃತ

Spread the love

ಹಾವೇರಿ:ಕಡರನಾಯ್ಕನಹಳ್ಳಿ: ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದ ಕಾರಣ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಹಾವೇರಿ ಜಿಲ್ಲೆಯ ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಪರಿಸರ ಜಲಾವೃತಗೊಂಡಿದೆ. ಇದರಿಂದಾಗಿ ರೈತರು ಮತ್ತು ಸ್ಥಳೀಯರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಸ್ತೆ ಸಂಚಾರಕ್ಕೆ ಅಡಚಣೆ, ಭಕ್ತರಿಗೆ ತೊಂದರೆ:
ಉಕ್ಕಡಗಾತ್ರಿ-ಪತ್ಯಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ರಾಣೇಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಮೂಲಕ ಮಾಳನಾಯ್ಕನಹಳ್ಳಿ ಮಾರ್ಗವಾಗಿ ಉಕ್ಕಡಗಾತ್ರಿಗೆ ತಲುಪುವ ರಸ್ತೆಯೂ ಜಲಾವೃತಗೊಳ್ಳುವ ಸಾಧ್ಯತೆ ಇದೆ.
ಶ್ರಾವಣ ಸೋಮವಾರದಂದು ಅಜ್ಜಯ್ಯನ ದರ್ಶನಕ್ಕೆ ಬಂದ ಭಕ್ತರು ಹೆಚ್ಚಾಗಿದ್ದು, ಪ್ರವಾಹದಿಂದಾಗಿ ಅವರಿಗೆ ತೊಂದರೆಯಾಗಿದೆ. ಅಜ್ಜಯ್ಯನ ದೇವಸ್ಥಾನದ ಗೋಡೆಗಳವರೆಗೆ ನೀರು ಆವರಿಸಿದ್ದು, ಭಕ್ತರ ತಂಗುದಾಣ ಮತ್ತು ಜವಳ ಕೇಂದ್ರಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ದೇವಸ್ಥಾನದ ಟ್ರಸ್ಟ್ ಈಗಾಗಲೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ ಎಂದು ಕಾರ್ಯದರ್ಶಿ ಎಸ್. ಸುರೇಶ್ ತಿಳಿಸಿದ್ದಾರೆ.

ರೈತರಿಗೆ ಲಕ್ಷಾಂತರ ನಷ್ಟ, ಪರಿಹಾರಕ್ಕೆ ಆಗ್ರಹ:
ನದಿ ಪ್ರವಾಹದಿಂದಾಗಿ ಹೊಲಗದ್ದೆಗಳು ಜಲಾವೃತವಾಗಿದ್ದು, ರೈತರು ಭಾರಿ ನಷ್ಟ ಅನುಭವಿಸಿದ್ದಾರೆ. ಭತ್ತದ ನಾಟಿ ಮಾಡಿದ ಗದ್ದೆಗಳು, ತರಕಾರಿ ಬೆಳೆಗಳು ಸಂಪೂರ್ಣವಾಗಿ ಮುಳುಗಿವೆ. ಅಡಿಕೆ ಮತ್ತು ತೆಂಗಿನ ತೋಟಗಳಿಗೂ ನದಿಯ ಹಿನ್ನೀರಿನಿಂದ ಹಾನಿಯಾಗಿದೆ. ಪ್ರತೀ ವರ್ಷ ಇದೇ ಪರಿಸ್ಥಿತಿ ಮರುಕಳಿಸುತ್ತಿದ್ದು, ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು ಎಂದು ಉಕ್ಕಡಗಾತ್ರಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಿಗಳೇರ ಚಂದ್ರಗೌಡ ಆಗ್ರಹಿಸಿದ್ದಾರೆ. ಹಳೆಪಾಳ್ಯ ಬಳಿ ಉಕ್ಕಡಗಾತ್ರಿಗೆ ಸಂಪರ್ಕ ಕಲ್ಪಿಸಲು ಸೇತುವೆ ನಿರ್ಮಾಣ ಮಾಡಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

ಅಧಿಕಾರಿಗಳ ಭರವಸೆ:
“ಅಡಿಕೆ ತೋಟಗಳಿಗೆ ತೊಂದರೆಯಾಗುವುದಿಲ್ಲ. ತೆಂಗಿನ ತೋಟಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ನದಿ ನೀರು ಕಡಿಮೆಯಾದರೆ ತೊಂದರೆ ಇಲ್ಲ. ಪರಿಶೀಲಿಸಿ ಕ್ರಮ ವಹಿಸಲಾಗುವುದು” ಎಂದು ತೋಟಗಾರಿಕೆ ಸಹಾಯಕ ಅಧಿಕಾರಿ ಸಂತೋಷ್ ತಿಳಿಸಿದ್ದಾರೆ. ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಎನ್.ಕೆ. ವಿಕಾಸ್ ಅವರು, “ಹಿನ್ನೀರಿನಿಂದ ಭತ್ತದ ಗದ್ದೆ ಮತ್ತು ತರಕಾರಿ ಬೆಳೆಗಳು ಮುಳುಗಿವೆ. ಪರಿಶೀಲನೆ ಮಾಡಿ ಮೇಲಧಿಕಾರಿಗೆ ವರದಿ ಸಲ್ಲಿಸಲಾಗುವುದು” ಎಂದು ಹೇಳಿದ್ದಾರೆ.

ರೈತರಾದ ಪದ್ಮಪ್ಪ ಪೂಜಾರ್, ಬೀರಪ್ಪ ಪೂಜಾರ್, ಕರಿಬಸಪ್ಪ, ಮಾಲತೇಶ ಮರಾಠಿ, ಹಾಗೂ ಗ್ರಾಮದ ವಕೀಲರಾದ ಮಂಜುನಾಥ್ ದೊಡ್ನನಿ ಮತ್ತು ಕೆ. ಬಸವರಾಜ್ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *