
ಬೆಂಗಳೂರು:2025ನೇ ಸಾಲಿನ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಒಟ್ಟು 70 ಗಣ್ಯರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರಕಟಗೊಂಡ ಬೆನ್ನಲ್ಲೇ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಎಲ್ಲಾ ವಿಜೇತರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧಕರ ಅನನ್ಯ ಸೇವೆಯು ನಾಡಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ ಎಂದು ಅವರು ಹಾರೈಸಿದ್ದಾರೆ.
ಸಾಹಿತ್ಯದಿಂದ ಸಮಾಜಸೇವೆವರೆಗೆ ಸಾಧಕರ ಗೌರವ
ಕರ್ನಾಟಕ ರಾಜ್ಯವು ತನ್ನ ಸಾಧಕರಿಗೆ ನೀಡುವ ಅತ್ಯುನ್ನತ ಗೌರವಗಳಲ್ಲಿ ಒಂದಾದ ರಾಜ್ಯೋತ್ಸವ ಪ್ರಶಸ್ತಿಯನ್ನು ಈ ಬಾರಿ ಸಾಹಿತ್ಯ, ಸಂಗೀತ, ಜಾನಪದ, ವೈದ್ಯಕೀಯ, ಶಿಕ್ಷಣ, ಕ್ರೀಡೆ, ಮಾಧ್ಯಮ, ಸಮಾಜಸೇವೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳು ತಮ್ಮ ಸಂದೇಶದಲ್ಲಿ, “ಸಾಹಿತ್ಯ, ಸಂಗೀತ, ಜಾನಪದ, ವೈದ್ಯಕೀಯ ಸೇರಿದಂತೆ ವಿವಿಧ ರಂಗಗಳಲ್ಲಿ ಈ ಎಲ್ಲರೂ ಸಲ್ಲಿಸಿದ ಅನನ್ಯ ಸೇವೆಯು ಇತರರಿಗೆ ಸ್ಪೂರ್ತಿಯಾಗಲಿ” ಎಂದು ತಿಳಿಸಿದ್ದಾರೆ.
ಈ ವರ್ಷದ ಪ್ರಶಸ್ತಿ ಪಟ್ಟಿಯು ಬಹುಮುಖ ಪ್ರತಿಭೆಗಳಿಗೆ ಸಾಕ್ಷಿಯಾಗಿದ್ದು, ಬಹುಭಾಷಾ ನಟ ಪ್ರಕಾಶ್ ರಾಜ್ (ಚಲನಚಿತ್ರ/ಕಿರುತೆರೆ), ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ವಿಗ್ರಹ ಕೆತ್ತಿದ ಶಿಲ್ಪಿ ಅರುಣ್ ಯೋಗಿರಾಜ್ (ಶಿಲ್ಪಕಲೆ), ಹಿರಿಯ ಲೇಖಕ ರಹಮತ್ ತರೀಕೆರೆ (ಸಾಹಿತ್ಯ), ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ (ಮಾಧ್ಯಮ) ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ (ಆಡಳಿತ) ಸೇರಿದಂತೆ 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಮಾಜದ ವಿವಿಧ ಸ್ತರದ ಹಾಗೂ ರಾಜ್ಯದ ಎಲ್ಲಾ ಭಾಗದ ಸಾಧಕರಿಗೆ ಈ ಆಯ್ಕೆಯಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ.
2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ
| ಕ್ಷೇತ್ರ | ಪ್ರಶಸ್ತಿ ವಿಜೇತರು |
|---|---|
| ಸಾಹಿತ್ಯ | ಪ್ರೊ. ರಾಜೇಂದ್ರ ಚೆನ್ನಿ (ಶಿವಮೊಗ್ಗ), ತುಂಬಾಡಿ ರಾಮಯ್ಯ (ತುಮಕೂರು), ಪ್ರೊ. ಅರ್. ಸುನಂದಮ್ಮ (ಚಿಕ್ಕಬಳ್ಳಾಪುರ), ಡಾ. ಎಚ್.ಎಲ್. ಪುಷ್ಪ (ತುಮಕೂರು), ರಹಮತ್ ತರೀಕೆರೆ (ಚಿಕ್ಕಮಗಳೂರು), ಹ.ಮ. ಪೂಜಾರ (ವಿಜಯಪುರ) |
| ಜಾನಪದ | ಬಸಪ್ಪ ಭರಮಪ್ಪ ಚೌಡ್ಕಿ (ಕೊಪ್ಪಳ), ಬಿ. ಟಾಕಪ್ಪ ಕಣ್ಣೂರು (ಶಿವಮೊಗ್ಗ), ಸನ್ನಿಂಗಪ್ಪ ಮುಶೆನ್ನಗೋಳ (ಬೆಳಗಾವಿ), ಹನುಮಂತಪ್ಪ, ಮಾರಪ್ಪ, ಚೀಳಂಗಿ (ಚಿತ್ರದುರ್ಗ), ಎಂ. ತೋಪಣ್ಣ (ಕೋಲಾರ), ಸೋಮಣ್ಣ ಧನಗೊಂಡ (ವಿಜಯಪುರ), ಸಿಂಧು ಗುಜರನ್ (ದ.ಕ.), ಎಲ್. ಮಹಾದೇವಪ್ಪ ಉಡಿಗಾಲ (ಮೈಸೂರು) |
| ಸಂಗೀತ | ದೇವೆಂದ್ರಕುಮಾರ ಪತ್ತಾರ್ (ಕೊಪ್ಪಳ), ಮಡಿವಾಳಯ್ಯ ಸಾಲಿ (ಬೀದರ್) |
| ನೃತ್ಯ | ಪ್ರೊ. ಕೆ. ರಾಮಮೂರ್ತಿ ರಾವ್ (ಮೈಸೂರು), ವಿದುಷಿ ಲಲಿತಾ ರಾವ್ |
| ರಂಗಭೂಮಿ | ಹೆಚ್.ಎಂ. ಪರಮಶಿವಯ್ಯ (ಬೆಂ. ದಕ್ಷಿಣ), ಎಲ್.ಬಿ.ಶೇಖ್ (ಮಾಸ್ತರ್) (ವಿಜಯಪುರ), ಬಂಗಾರಪ್ಪ ಖುದಾನ್ಪುರ (ಬೆಂಗಳೂರು), ಮೈಮ್ ರಮೇಶ್ (ದ.ಕ.), ಡಿ. ರತ್ನಮ್ಮ ದೇಸಾಯಿ (ರಾಯಚೂರು) |
| ಚಲನಚಿತ್ರ/ಕಿರುತೆರೆ | ಪ್ರಕಾಶ್ ರಾಜ್, ವಿಜಯಲಕ್ಷ್ಮಿ ಸಿಂಗ್ |
| ಸಮಾಜ ಸೇವೆ | ವೀರಸಂಗಯ್ಯ, ಹೀರಾಚಂದ್ ವಾಗ್ಮರೆ, ಮಲ್ಲಮ್ಮ ಸೂಲಗಿತ್ತಿ, ದಿಲೀಪ್ ಕುಮಾರ್, ಕೊರಿನ್ ರಸ್ಕಿನ್ಹಾ (ದ.ಕ.) |
| ವೈದ್ಯಕೀಯ | ಡಾ. ಜೆ.ಬಿ. ಬಿಡನಹಾಳ, ಡಾ. ಮೈಸೂರು ಸತ್ಯಾನಾರಾಯಣ, ಡಾ. ಲಕ್ಷ್ಮಣ ಹನುಮಂತಪ್ಪ ಬಿದರಿ |
| ಶಿಲ್ಪಕಲೆ | ಅರುಣ್ ಯೋಗಿರಾಜ್ (ಮೈಸೂರು) |
| ಆಡಳಿತ | ಎಸ್.ವಿ. ರಂಗನಾಥ್ (ಮಾಜಿ ಮುಖ್ಯ ಕಾರ್ಯದರ್ಶಿ) |
| ಮಾಧ್ಯಮ | ಎನ್.ಎಸ್. ಶಂಕರ್, ಸನತ್ ಕುಮಾರ್ ಬೆಳಗಲಿ, ಎ.ಜಿ. ಕಾರಟಗಿ, ರಾಮಕೃಷ್ಣ ಬಡಶೇಶಿ, ಬಿ.ಎಂ. ಹನೀಫ್ |
| ಕೃಷಿ, ಪರಿಸರ, ಇತರೆ | ಶಿವನಾಪುರ ರಮೇಶ (ಕೃಷಿ), ಪುಟ್ಟೀರಮ್ಮ (ಕೃಷಿ), ಆಲ್ಮಿತ್ರಾ ಪಟೇಲ್ (ಪರಿಸರ), ಹುಲಿಕಲ್ ನಟರಾಜ್ (ಸಂಕೀರ್ಣ), ಝಕರಿಯಾ ಜೊಕಟ್ಟೆ (ಅನಿವಾಸಿ ಕನ್ನಡಿಗರು) |
ಹೀಗೆ 70 ಸಾಧಕರಿಗೆ ಸಚಿವ ಶಿವರಾಜ ತಂಗಡಿಯವರು ಪ್ರಶಸ್ತಿ ಘೋಷಿಸಿ ಪ್ರಕಟಣೆಗೆ ತಿಳಿಸಿದ್ದಾರೆ.

