ಜೈಪುರ: ಉದಯಪುರದಲ್ಲಿ 55ನೇ ವಯಸ್ಸಿನಲ್ಲಿ 17ನೇ ಮಗುವಿಗೆ ಜನ್ಮ ನೀಡಿದ ಮಹಿಳೆ

Spread the love

ಜೈಪುರ: ರಾಜಸ್ಥಾನದ ಉದಯಪುರದಲ್ಲಿ 55 ವರ್ಷದ ಮಹಿಳೆಯೊಬ್ಬರು ತನ್ನ 17ನೇ ಮಗುವಿಗೆ ಜನ್ಮ ನೀಡಿ ಆಶ್ಚರ್ಯ ಮೂಡಿಸಿದ್ದಾರೆ. ಮಂಗಳವಾರ (ಆಗಸ್ಟ್ 26) ರೇಖಾ ಗಲಿಯಾ ಎಂಬ ಈ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ಈ ವಿಷಯ ಬೆಳಕಿಗೆ ಬಂದಿದೆ.

ರೇಖಾ ಅವರು ಈ ಹಿಂದೆ 16 ಮಕ್ಕಳನ್ನು ಹೊಂದಿದ್ದರು. ಅವರಲ್ಲಿ ನಾಲ್ವರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಮಗಳು ಹುಟ್ಟಿದ ತಕ್ಷಣವೇ ಮೃತಪಟ್ಟಿದ್ದಾರೆ. ಬದುಕುಳಿದಿರುವ ಮಕ್ಕಳಲ್ಲಿ ಐದು ಮಂದಿ ಮದುವೆಯಾಗಿ ತಮ್ಮದೇ ಆದ ಮಕ್ಕಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ.

ಕಡು ಬಡತನದಲ್ಲಿ ಕುಟುಂಬ
ಕುಟುಂಬವು ತೀವ್ರ ಬಡತನದಲ್ಲಿದ್ದು, ಜೀವನ ನಿರ್ವಹಣೆಗಾಗಿ ಹಗಲು ರಾತ್ರಿ ಕಷ್ಟಪಡುತ್ತಿದ್ದಾರೆ. ರೇಖಾ ಅವರ ಪತಿ ಕಾವ್ರ ಕಲ್ಬಲಿಯಾ, “ನಮಗೆ ಸ್ವಂತ ಮನೆಯಿಲ್ಲ ಮತ್ತು ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳನ್ನು ಸಾಕಲು ನಾನು ಬಡ್ಡಿದಾರರಿಂದ ಶೇಕಡಾ 20ರಷ್ಟು ಬಡ್ಡಿಗೆ ಹಣ ಪಡೆದಿದ್ದೇನೆ. ಲಕ್ಷಾಂತರ ರೂಪಾಯಿ ಮರುಪಾವತಿಸಿದ್ದರೂ, ಬಡ್ಡಿ ಇನ್ನೂ ಬಾಕಿ ಇದೆ” ಎಂದು ತಿಳಿಸಿದ್ದಾರೆ.
ಅವರು ಗುಜರಿ ಆಯುವ ಕೆಲಸ ಮಾಡುತ್ತಾರೆ. ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಲೂ ಸಾಧ್ಯವಾಗುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಮಂಜೂರಾಗಿದ್ದರೂ, ಜಾಗ ಅವರ ಹೆಸರಿನಲ್ಲಿಲ್ಲದ ಕಾರಣ ನಿರಾಶ್ರಿತರಾಗಿಯೇ ಉಳಿದಿದ್ದಾರೆ. ಆಹಾರ, ಮದುವೆ ಅಥವಾ ಶಿಕ್ಷಣಕ್ಕೆ ಸಾಕಷ್ಟು ಸಂಪನ್ಮೂಲಗಳಿಲ್ಲದಿರುವುದು ಕುಟುಂಬವನ್ನು ಪ್ರತಿದಿನ ಕಾಡುತ್ತಿದೆ ಎಂದು ಅವರು ಹೇಳಿದ್ದಾರೆ.

ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ
ಜಾಡೋಲ್ ಸಮುದಾಯ ಆರೋಗ್ಯ ಕೇಂದ್ರದ ಸ್ತ್ರೀರೋಗ ತಜ್ಞ ರೋಷನ್ ದರಂಗಿ, “ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿದಾಗ, ಕುಟುಂಬದವರು ಇದು ಅವರ ನಾಲ್ಕನೇ ಹೆರಿಗೆ ಎಂದು ನಮಗೆ ತಿಳಿಸಿದ್ದರು. ನಂತರ, ಇದು ಅವರ 17ನೇ ಮಗು ಎಂದು ತಿಳಿದುಬಂದಾಗ ನಾವು ಆಘಾತಗೊಂಡಿದ್ದೇವೆ” ಎಂದಿದ್ದಾರೆ.

ಈ ಅಸಾಮಾನ್ಯ ಘಟನೆ ಕುರಿತು ಜಿತೇಂದ್ರ ಪ್ರತಾಪ್ ಸಿಂಗ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವುದು ವಿಶೇಷ.

Leave a Reply

Your email address will not be published. Required fields are marked *