ಸಿಂಧನೂರು: ಮೃತದೇಹ ಸಾಗಿಸಲು ಹಳ್ಳ ದಾಟುವ ಗೋಮರ್ಸಿ ಗ್ರಾಮಸ್ಥರ ಗೋಳು – ಸರ್ಕಾರದ ಗಮನ ಸೆಳೆಯಲು ನಿವಾಸಿಗಳ ಆಗ್ರಹ

Spread the love

ಸಿಂಧನೂರು: ಮೃತದೇಹ ಸಾಗಿಸಲು ಹಳ್ಳ ದಾಟುವ ಗೋಮರ್ಸಿ ಗ್ರಾಮಸ್ಥರ ಗೋಳು – ಸರ್ಕಾರದ ಗಮನ ಸೆಳೆಯಲು ನಿವಾಸಿಗಳ ಆಗ್ರಹ

ಸಿಂಧನೂರು: ಬದುಕಿರುವಾಗ ರಸ್ತೆ, ಸೇತುವೆಯಂತಹ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವ ಜನರು, ಮರಣದ ನಂತರವೂ ನೆಮ್ಮದಿಯ ಅಂತ್ಯಸಂಸ್ಕಾರಕ್ಕೆ ಒದ್ದಾಡುವ ದುಃಸ್ಥಿತಿ ಸಿಂದನೂರು ತಾಲ್ಲೂಕಿನ ಗೋಮರ್ಸಿ ಗ್ರಾಮದಲ್ಲಿದೆ. ಮಳೆಗಾಲ ಮತ್ತು ತುಂಗಭದ್ರಾ ಜಲಾಶಯದಿಂದ ನೀರು ಬಿಟ್ಟಾಗ ಗ್ರಾಮದ ಜನರು ಮೃತದೇಹವನ್ನು ಹೂಳಲು ಹಳ್ಳವನ್ನು ದಾಟುವ ಅನಿವಾರ್ಯ ಪರಿಸ್ಥಿತಿ ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಿದೆ.

ಶನಿವಾರದ ನಡೆದ ಘಟನೆಯಲ್ಲಿ ಮೃತದೇಹ ಸಾಗಾಟಕ್ಕೆ ಪಡಿಪಾಟಲು
ಶನಿವಾರ ವೀರೇಶ ತೆಲುಗರ ಎಂಬುವವರು ನಿಧನರಾದಾಗ, ಅವರ ಅಂತ್ಯಸಂಸ್ಕಾರಕ್ಕಾಗಿ ಗ್ರಾಮಸ್ಥರು ಮತ್ತು ಸಂಬಂಧಿಕರು ಮೃತದೇಹವನ್ನು ಸ್ಮಶಾನಕ್ಕೆ ಕೊಂಡೊಯ್ಯಲು ಭಾರೀ ಹರಸಾಹಸ ಪಡಬೇಕಾಯಿತು. ಮಳೆ ಮತ್ತು ನೀರಿನ ರಭಸದಿಂದಾಗಿ ಹಳ್ಳ ದಾಟುವುದು ಅತ್ಯಂತ ಅಪಾಯಕಾರಿಯಾಗಿತ್ತು. ಈ ಘಟನೆ ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಹಿಂದೆ ಇದೇ ಗ್ರಾಮದಲ್ಲಿ ಹುಸೇನಪ್ಪ ಅವರ ಮೃತದೇಹವನ್ನು ಹೊತ್ತೊಯ್ಯುವಾಗ ನೀರಿನ ರಭಸಕ್ಕೆ ಶವ ಕೊಚ್ಚಿ ಹೋಗಿ, ನಂತರ ಬಹಳ ಕಷ್ಟಪಟ್ಟು ಹುಡುಕಿ ಅಂತ್ಯಸಂಸ್ಕಾರ ನಡೆಸಿದ ದುರಂತ ನಡೆದಿತ್ತು. ಈ ಘಟನೆ ನಡೆದರೂ ಸಹ ಸರ್ಕಾರವಾಗಲಿ ಅಥವಾ ಸ್ಥಳೀಯ ಆಡಳಿತವಾಗಲಿ ಯಾವುದೇ ಶಾಶ್ವತ ಪರಿಹಾರ ಕಂಡುಕೊಂಡಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ನಾಗರಿಕರ ಮೂಲಭೂತ ಹಕ್ಕುಗಳಾದ ನೆಮ್ಮದಿಯ ಬದುಕಿಗೆ ಮತ್ತು ಮರಣದ ನಂತರದ ಗೌರವಕ್ಕೂ ಧಕ್ಕೆಯಾಗುತ್ತಿದೆ.
ಗ್ರಾಮದಲ್ಲಿ ಸೇತುವೆ ನಿರ್ಮಿಸಲು ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಗಂಭೀರ ಸಮಸ್ಯೆಯನ್ನು ಸರ್ಕಾರ ತುರ್ತಾಗಿ ಪರಿಗಣಿಸಬೇಕು. ಇನ್ನೊಬ್ಬ ವ್ಯಕ್ತಿಯ ಮೃತದೇಹವು ನೀರಿನಲ್ಲಿ ಕೊಚ್ಚಿ ಹೋಗುವ ದುರಂತ ನಡೆಯುವ ಮುನ್ನ, ಕೂಡಲೇ ಹಳ್ಳಕ್ಕೆ ಸೇತುವೆ ನಿರ್ಮಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಗ್ರಾಮಸ್ಥರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇದು ಕೇವಲ ಸ್ಥಳೀಯ ಸಮಸ್ಯೆಯಲ್ಲ, ಬದಲಾಗಿ ರಾಜ್ಯ ಸರ್ಕಾರದ ಮಾನವೀಯತೆಯನ್ನು ಪ್ರಶ್ನಿಸುವ ವಿಷಯವಾಗಿದೆ.

Leave a Reply

Your email address will not be published. Required fields are marked *