
ಧಾರವಾಡ, ಡಿ. 11: ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಡಿಯಲ್ಲಿ ಡಿಸೆಂಬರ್ 21 ರಂದು ಐದು ವರ್ಷದೊಳಗಿನ ಸುಮಾರು 2,07,837 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಬೃಹತ್ ಗುರಿಯನ್ನು ಹೊಂದಲಾಗಿದೆ. ಈ ಕುರಿತು ಗುರುವಾರದಂದು ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಅಭಿಯಾನದ ಯಶಸ್ಸಿಗಾಗಿ ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಡಿಸೆಂಬರ್ 21 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಜಿಲ್ಲೆಯಾದ್ಯಂತ ಸ್ಥಾಪಿಸಲಾದ ಒಟ್ಟು 891 ಲಸಿಕಾ ಕೇಂದ್ರಗಳಲ್ಲಿ (ಬೂತ್) ಲಸಿಕೆ ವಿತರಿಸಲಾಗುವುದು. ಯಾವುದೇ ಮಗು ವಂಚಿತವಾಗದಂತೆ ನೋಡಿಕೊಳ್ಳಲು 92 ಟ್ರಾಂಜಿಟ್ ತಂಡಗಳು ಹಾಗೂ 57 ಸಂಚಾರಿ ತಂಡಗಳನ್ನು ರಚಿಸಲಾಗಿದೆ. ಅಭಿಯಾನದಲ್ಲಿ ಒಟ್ಟು 3,829 ವ್ಯಾಕ್ಸಿನೇಟರ್ಗಳು ಹಾಗೂ 214 ಮೇಲ್ವಿಚಾರಕರು ಭಾಗವಹಿಸಲಿದ್ದು, ಜಿಲ್ಲೆಯ ಒಟ್ಟು 4,28,540 ಮನೆಗಳಿಗೆ ಭೇಟಿ ನೀಡುವ ಗುರಿ ಹೊಂದಲಾಗಿದೆ. ಡಿಸೆಂಬರ್ 21 ರಂದು ಬೂತ್ಗಳಲ್ಲಿ ಲಸಿಕೆ ಪಡೆದ ನಂತರ, ಉಳಿದ ಮಕ್ಕಳಿಗಾಗಿ ಗ್ರಾಮೀಣ ಪ್ರದೇಶದಲ್ಲಿ ಡಿಸೆಂಬರ್ 22 ರಿಂದ 23 ರವರೆಗೆ ಹಾಗೂ ನಗರ ಪ್ರದೇಶದಲ್ಲಿ ಡಿಸೆಂಬರ್ 22 ರಿಂದ 24 ರವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ಅಭಿಯಾನದ ಬಗ್ಗೆ ಜನಜಾಗೃತಿ ಮೂಡಿಸಲು ಡಿಸೆಂಬರ್ 20 ರಂದು ಎಲ್ಲಾ ಶಾಲೆಗಳಲ್ಲಿ ಜಾಥಾ ಹಮ್ಮಿಕೊಳ್ಳಲು ಮತ್ತು ಲಸಿಕಾ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಶಾಲಾ ಕೊಠಡಿಗಳನ್ನು ಸಜ್ಜುಗೊಳಿಸಲು ಶಿಕ್ಷಣ ಇಲಾಖೆಗೆ ಸೂಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಥಳೀಯ ಮಾಧ್ಯಮಗಳ ಮೂಲಕ ಪ್ರಚಾರ ಕೈಗೊಳ್ಳುವುದು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನಿರ್ದೇಶಿಸಿದರು. ನಗರ ಪ್ರದೇಶದ ಕೊಳಚೆ ಪ್ರದೇಶಗಳಲ್ಲಿ ಬ್ಯಾನರ್ ಮತ್ತು ಬಿತ್ತಿಪತ್ರಗಳ ಮೂಲಕ ವಿಶೇಷ ಪ್ರಚಾರ ಕೈಗೊಳ್ಳುವಂತೆ ಮತ್ತು ಖಾಸಗಿ ಆಸ್ಪತ್ರೆಗಳು ತಮ್ಮ ಒಪಿಡಿಗಳಲ್ಲಿ ಚಿಕಿತ್ಸೆಗೆ ಬರುವ ಮಕ್ಕಳು ಲಸಿಕೆ ಪಡೆದಿರುವುದನ್ನು ಖಾತರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಲಸಿಕೆಗಳ ಶೇಖರಣೆಗೆ ಶೀತಲ ಸರಪಳಿ ನಿರ್ವಹಣೆ ಅತ್ಯಗತ್ಯವಾಗಿರುವುದರಿಂದ, ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಯಿತು. ರೈಲ್ವೆ ನಿಲ್ದಾಣಗಳು ಮತ್ತು ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸಿಸುವ ವಲಸೆ ಕಾರ್ಮಿಕರ ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಿ ಲಸಿಕೆ ತಲುಪಿಸುವಂತೆ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಭುವನೇಶ ಪಾಟೀಲ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್.ಎಂ. ಹೊನಕೇರಿ, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಸುಜಾತ ಹಸವೀಮಠ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

