ಅಣ್ಣಿಗೇರಿ ತಹಶೀಲ್ದಾರ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಜನತಾ ದರ್ಶನ: ಸಾಸ್ವಿಹಳ್ಳಿ ಸ್ಮಶಾನ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಗಡುವು

Spread the love

ಅಣ್ಣಿಗೇರಿ: ಸಾರ್ವಜನಿಕರ ದೂರುಗಳಿಗೆ ತಕ್ಷಣ ಸ್ಪಂದಿಸಿ, ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಇಂದು ಅಣ್ಣಿಗೇರಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಭೇಟಿ ನೀಡಿ ಅಹವಾಲುಗಳನ್ನು ಸ್ವೀಕರಿಸಿದರು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದೆ ಬಿಚ್ಚಿಟ್ಟರು. ಈ ವೇಳೆ ಪ್ರಮುಖವಾಗಿ ಸಾಸ್ವಿಹಳ್ಳಿ ಗ್ರಾಮದ ಸ್ಮಶಾನ ಭೂಮಿಯ ಸಮಸ್ಯೆಯು ಜಿಲ್ಲಾಧಿಕಾರಿಗಳ ಗಮನ ಸೆಳೆಯಿತು. ಗ್ರಾಮಕ್ಕೆ ಮಂಜೂರಾದ ಸ್ಮಶಾನ ಭೂಮಿಯಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುತ್ತಿದ್ದು, ಅಲ್ಲಿಗೆ ಹೋಗುವ ದಾರಿಯೂ ದುಸ್ತರವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. ಕೂಡಲೇ ಸ್ಥಳ ಪರಿಶೀಲನೆ ನಡೆಸಿ ರಸ್ತೆ ಎತ್ತರಿಸುವುದು ಅಥವಾ ಪರ್ಯಾಯ ಜಾಗ ಗುರುತಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಖಡಕ್ ನಿರ್ದೇಶನ ನೀಡಿದರು.

​ಅಣ್ಣಿಗೇರಿ ಪಟ್ಟಣದ ನಿವಾಸಿಗಳು ಪಟ್ಟಣದ ರಸ್ತೆ, ಒಳಚರಂಡಿ ಹಾಗೂ ಉದ್ಯಾನವನಗಳ ಉನ್ನತೀಕರಣಕ್ಕೆ ಮನವಿ ಸಲ್ಲಿಸಿದರೆ, ರೈತ ಮುಖಂಡರು ಬೆಳೆ ಪರಿಹಾರ, ವಿಮೆ ಮತ್ತು ಖರೀದಿ ಕೇಂದ್ರಗಳ ಸಮರ್ಪಕ ನಿರ್ವಹಣೆ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಸಾರ್ವಜನಿಕರ ಮನವಿಗಳನ್ನು ಆಲಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮ ಪಂಚಾಯತ್ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಕಸದ ವಿಲೇವಾರಿ ಮತ್ತು ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು. ಅಧಿಕಾರಿಗಳು ಸಮನ್ವಯದಿಂದ ಕೆಲಸ ಮಾಡಿ ಜನಸಾಮಾನ್ಯರಿಗೆ ಕಚೇರಿಗಳಲ್ಲಿ ಕಿರಿಕಿರಿ ಆಗದಂತೆ ಸಮಯಕ್ಕೆ ಸರಿಯಾಗಿ ಸೇವೆ ಒದಗಿಸಬೇಕು ಎಂದು ಎಚ್ಚರಿಸಿದರು.

​ಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು, ತೆರಿಗೆ ವಸೂಲಾತಿ ಮತ್ತು ಆನ್‌ಲೈನ್ ಸೇವೆಗಳ ವಿಲೇವಾರಿಯಲ್ಲಿ ವೇಗ ಹೆಚ್ಚಿಸಲು ತಿಳಿಸಿದರು. ಇದೇ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕಿನಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ‘ಪ್ರಜಾಸೌಧ’ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾರ್ಯಕ್ರಮದಲ್ಲಿ ಪ್ರೊಬೇಷನರ್ ಐಎಎಸ್ ಅಧಿಕಾರಿ ರಿತೀಕಾ ವರ್ಮಾ, ಅಣ್ಣಿಗೇರಿ ತಹಶೀಲ್ದಾರ್ ಎಂ.ಜಿ. ದಾಸಪ್ಪನವರ, ತಾಲೂಕು ಪಂಚಾಯತ್ ಇಒ ಇ.ಆರ್. ಬಡೆಖಾನ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *