
ನವಲಗುಂದ: ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಯನ್ನು ಉತ್ತೇಜಿಸುವುದರೊಂದಿಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಉದ್ದೇಶದಿಂದ, ನವಲಗುಂದದ ಶಂಕರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಹಾಗೂ ಕರ್ನಾಟಕ ಲೋಕಾಯುಕ್ತ ಧಾರವಾಡ ವಿಭಾಗದ ವತಿಯಿಂದ ಜಂಟಿಯಾಗಿ “ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ–2025” ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲೋಕಾಯುಕ್ತ ಎಸ್‌ಪಿ ಪ್ರಭುಲಿಂಗಯ್ಯ ಹಿರೇಮಠ ಅವರು, ಭ್ರಷ್ಟಾಚಾರವು ಸಮಾಜದ ಪ್ರಗತಿಗೆ ದೊಡ್ಡ ಅಡ್ಡಿಯಾಗಿದ್ದು, ಪ್ರತಿಯೊಬ್ಬ ಪ್ರಜೆಯೂ ಎಚ್ಚರದಿಂದಿದ್ದು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದಾಗ ಮಾತ್ರ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಲು ಸಾಧ್ಯ ಎಂದರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆಯು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು. “ಲೋಕಾಯುಕ್ತ ಸಂಸ್ಥೆಯು ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರ ಸಹಕಾರ ಅತ್ಯಗತ್ಯ,” ಎಂದು ಅವರು ಕರೆ ನೀಡಿದರು.
ಶಂಕರ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರು ಡಾ. ಶೀಲಾ ಎಂ. ತುಬಚಿ ಅವರು, ಭ್ರಷ್ಟಾಚಾರದಿಂದಾಗುವ ದುಷ್ಪರಿಣಾಮಗಳು, ಪ್ರಾಮಾಣಿಕ ಜೀವನದ ಮಹತ್ವ ಮತ್ತು ಭ್ರಷ್ಟಾಚಾರದ ಕುರಿತು ದೂರು ನೀಡುವ ವಿಧಾನಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾದ ಮಾಹಿತಿ ನೀಡಿದರು. ಈ ಜಾಗೃತಿ ಸಪ್ತಾಹವು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮತ್ತು ಸಿಬ್ಬಂದಿ ವರ್ಗದಲ್ಲಿ ಪ್ರಾಮಾಣಿಕತೆಯ ಅರಿವು ಮೂಡಿಸಲು ನೆರವಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಾಯುಕ್ತ ಇಲಾಖೆಯ ಇನ್ಸ್‌ಪೆಕ್ಟರ್ ಪ್ರಸಾದ ಪರ್ಣೇಕರ, ಲೋಕಾಯುಕ್ತ ಡಿಎಸ್‌ಪಿ ವೆಂಕನಗೌಡ ಪಾಟೀಲ, ನಗರ ಪೊಲೀಸ್ ಠಾಣೆಯ ಸಿ.ಪಿ.ಐ. ರವಿಕುಮಾರ ಕಪ್ಪತ್ತನವರ, ಡಾ. ಆರ್.ಪಿ. ಚವ್ಹಾಣ ಮತ್ತು ಡಾ. ಆರ್.ಎಸ್. ಹಿರೇಮಠ ಉಪಸ್ಥಿತರಿದ್ದರು. ಡಾ. ಎಂ.ಎನ್. ಹಾರೋಗೇರಿ ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ಕೊನೆಯಲ್ಲಿ ಮಹೇಶ್ ಬಿ.ಕೆ. ವಂದಿಸಿದರು.

