ಧಾರವಾಡ: ಕಲಘಟಗಿ ವಲಯದ ವಿವಿಧೆಡೆ ಅಪಾಯಕಾರಿ ಸ್ಥಿತಿಯಲ್ಲಿರುವ ಹಾಗೂ ಕಟ್ಟಡ ನಿರ್ಮಾಣಕ್ಕೆ ಅಡಚಣೆಯಾಗಿರುವ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯು ಫೆಬ್ರವರಿ 27 ಮತ್ತು ಮಾರ್ಚ್ 11, 2026 ರಂದು ಬಹಿರಂಗ ಹರಾಜು ಹಮ್ಮಿಕೊಂಡಿದೆ. ಕಲಘಟಗಿ-ಧಾರವಾಡ ಮುಖ್ಯರಸ್ತೆಯ ಹಿರೇಹೊನ್ನಳ್ಳಿ ಗ್ರಾಮದ ದೂಳಿಕೊಪ್ಪ ಕ್ರಾಸ್ ಹತ್ತಿರ ಇರುವ 3 ಅಪಾಯಕಾರಿ ಮರಗಳು ಹಾಗೂ ಗಂಜಿಗಟ್ಟಿ ಗ್ರಾಮದ ಕಸ್ತೂರಿಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದ ಆವರಣದಲ್ಲಿ ನೂತನ ವಸತಿ ನಿಲಯ ನಿರ್ಮಾಣಕ್ಕೆ ಅಡಚಣೆಯಾಗಿರುವ 26 ವಿವಿಧ ಜಾತಿಯ ಮರಗಳು ಸೇರಿದಂತೆ ಒಟ್ಟು 29 ಮರಗಳು ಹಾಗೂ 23 ಎಳೆಗಳನ್ನು ಅಂದು ಮಧ್ಯಾಹ್ನ 3 ಗಂಟೆಗೆ ಕಲಘಟಗಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯಲ್ಲಿ ಹರಾಜು ಮಾಡಲಾಗುವುದು.
ಮರ ಸಂರಕ್ಷಣಾ ಕಾಯ್ದೆ 1976 ರ ಅನ್ವಯ ಈ ಮರಗಳ ತೆರವಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಏನಾದರೂ ತಕರಾರುಗಳನ್ನು ಹೊಂದಿದ್ದಲ್ಲಿ, ಅವುಗಳನ್ನು ಲಿಖಿತ ರೂಪದಲ್ಲಿ ಫೆಬ್ರವರಿ 26, 2026 ರ ಒಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಸಕ್ತರು ತಮ್ಮ ಆಕ್ಷೇಪಣೆಗಳನ್ನು ಧಾರವಾಡ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಥವಾ ಧಾರವಾಡದ ಕೆ.ಸಿ. ಪಾರ್ಕ್ ಎದುರಿಗಿರುವ ಅರಣ್ಯ ಸಂಕೀರ್ಣದಲ್ಲಿರುವ ಮರ ಅಧಿಕಾರಿಯವರಿಗೆ ಸಲ್ಲಿಸಬಹುದಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

