
ಸತ್ಯ, ಅಹಿಂಸೆ ತತ್ವಗಳು ಇಂದಿನ ಯುವಕರಿಗೆ ಆದರ್ಶ; ಸಂಶಿಯಲ್ಲಿ ಜಯಂತಿ ಆಚರಣೆ
ಕುಂದಗೋಳ: ಸತ್ಯ, ಅಹಿಂಸೆ ಮತ್ತು ಶಾಂತಿಯ ವಿಶ್ವಮೌಲ್ಯಗಳನ್ನು ಜಗತ್ತಿಗೆ ಪರಿಚಯಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ತತ್ವ ಹಾಗೂ ಆದರ್ಶ ಗುಣಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಕೆಪಿಸಿಸಿ ಒಬಿಸಿ ರಾಜ್ಯ ಕಾರ್ಯದರ್ಶಿ ಎಚ್.ಎಸ್. ಲಕ್ಷ್ಮೇಶ್ವರ ಹೇಳಿದರು.
ತಾಲೂಕಿನ ಸಂಶಿ ಗ್ರಾಮದ ಗಾಂಧೀಜಿ ಸರ್ಕಲ್‌ನಲ್ಲಿ ಗುರುವಾರದಂದು ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯತ್ ಸದಸ್ಯ ಹನುಮಂತ ಎಸ್. ಲಕ್ಷ್ಮೇಶ್ವರ ಅವರ ನೇತೃತ್ವದಲ್ಲಿ ಗಾಂಧೀಜಿ ಮೂರ್ತಿಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡುವ ಮೂಲಕ ಮಹಾತ್ಮರಿಗೆ ಗೌರವ ನಮನ ಸಲ್ಲಿಸಲಾಯಿತು.
ಶಾಸ್ತ್ರೀಜಿಯ ‘ಜೈ ಜವಾನ್, ಜೈ ಕಿಸಾನ್’
ದೇಶದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಕೊಡುಗೆಯನ್ನು ಸ್ಮರಿಸಿದ ಎಚ್.ಎಸ್. ಲಕ್ಷ್ಮೇಶ್ವರ ಅವರು, ಶಾಸ್ತ್ರೀಜಿಯವರು ದೇಶದ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಸುಧಾರಣಾ ಕಾರ್ಯಗಳನ್ನು ಕೈಗೊಂಡರು. ದೇಶದ ಸೈನಿಕರಿಗೆ ಮತ್ತು ರೈತರಿಗೆ ಪ್ರೋತ್ಸಾಹ ನೀಡಲು ಅವರು ನೀಡಿದ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆ ಇಂದಿಗೂ ಪ್ರಸ್ತುತ. ದೇಶದ ಪ್ರಗತಿಯಲ್ಲಿ ಅವರ ಪಾತ್ರ ಅಜರಾಮರ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಶಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ರಾಜೀವ್ ಟಿ. ಪುಟ್ಟಣ್ಣವರ್ ಅವರು, ಗಾಂಧೀಜಿ ಹಾಗೂ ಶಾಸ್ತ್ರೀಜಿ ಜಯಂತಿಯ ಐತಿಹಾಸಿಕ ಮಹತ್ವ ಮತ್ತು ದೇಶದ ಪ್ರಗತಿಯ ಕುರಿತು ಚಿಂತನೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಕೀಲರಾದ ಜಿ.ಎಫ್. ಹಾದಿಮನಿ, ರಾಜೇಸಾಬ್ ಮೋಟೆಬೆನ್ನೂರ್, ಸಂತೋಷ್ ನಾಯ್ಕರ್, ಎಸ್.ಬಿ. ರೆಡ್ಡರ್, ಎ.ಸಿ. ಹಾದಿಮನಿ, ನಾಗರಾಜ್ ಕಾಕುಂಬಿ, ಶಂಕರ್ ಹಾದಿಮನಿ, ರಮೇಶ್ ಪಶುಪತಿಹಾಳ, ಬಸನಗೌಡ ಹಿರೇಗೌಡ್ರ್, ಬಿ.ಜಿ. ಬಾಲೆ ಹೊಸೂರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

