ಪ್ರೊ. ಬಿ. ವಿ. ಗುಂಜೆಟ್ಟಿ ಕನ್ನಡ ಸೇವೆ ಸ್ಮರಣೀಯ: ಡಾ. ಜಿ. ಎಂ. ಹೆಗಡೆ

Spread the love

ಪ್ರೊ. ಬಿ. ವಿ. ಗುಂಜೆಟ್ಟಿ ಕನ್ನಡ ಸೇವೆ ಸ್ಮರಣೀಯ: ಡಾ. ಜಿ. ಎಂ. ಹೆಗಡೆ

ಧಾರವಾಡ: ಪ್ರೊ. ಬಿ. ವಿ. ಗುಂಜೆಟ್ಟಿ ಅವರು ಕನ್ನಡದ ಸೇವೆಯನ್ನು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಮಾಡಿದ ಅಪರೂಪದ ವ್ಯಕ್ತಿಗಳು ಎಂದು ಡಾ. ಜಿ. ಎಂ. ಹೆಗಡೆ ಅವರು ಬಣ್ಣಿಸಿದರು. ಸಮಾಜ ಜೀವನದ ಒಂದು ಭಾಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶ್ರೇಯೋಭಿಲಾಷೆಗಾಗಿ ಗುಂಜೆಟ್ಟಿ ಅವರು ಸುದೀರ್ಘ ಸೇವೆಗೈದಿದ್ದಾರೆ ಎಂದು ಅವರು ಹೇಳಿದರು.

ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಪ್ರೊ. ಬಿ. ವಿ. ಗುಂಜೆಟ್ಟಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಮನಮುಟ್ಟುವ ಪಾಠ ಬೋಧನೆ
ಪ್ರೊ. ರಾಜಶೇಖರ ಜಾಡರ ಮಾತನಾಡಿ, ಪ್ರೊ. ಬಿ. ವಿ. ಗುಂಜೆಟ್ಟಿ ಅವರು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪಾಠ ಬೋಧನೆ ಮಾಡುವ ಕಲೆ ಕರಗತ ಮಾಡಿಕೊಂಡಿದ್ದರು. ಗೋಕಾಕ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕನ್ನಡ ಸೇವೆಗೆ ಬದ್ಧತೆ ತೋರಿದ್ದರು. ಪ್ರವಾಸ ಪ್ರಿಯರಾಗಿದ್ದ ಅವರು ಸೌಜನ್ಯಯುತ ನಡೆ-ನುಡಿ ಹೊಂದಿದ್ದರು ಎಂದರು. ವಿಜಯಪುರದ ಡಾ. ಓಂಕಾರ ಕಾಕಡೆ ಅವರು ಮಾತನಾಡಿ, ಗುಂಜೆಟ್ಟಿ ಅವರು ನನ್ನ ವೃತ್ತಿ ಬದುಕಿನ ಚೇತನರಾಗಿದ್ದರು. ನನ್ನ ಸಾಧನೆ ಹಿಂದೆ ಅವರ ಪ್ರಭಾವವಿದ್ದು, ಅವರು ವಿದ್ಯಾರ್ಥಿಗಳ ನಾಡಿ ಮಿಡಿತ ಬಲ್ಲವರಾಗಿದ್ದರು ಎಂದು ಸ್ಮರಿಸಿದರು.

ಡಾ. ರಾಜೇಶ್ವರಿ ಮಹೇಶ್ವರಯ್ಯ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಶಿ. ಮ. ರಾಚಯ್ಯನವರ ಅವರು ಗುಂಜೆಟ್ಟಿ ಅವರ ವ್ಯಕ್ತಿತ್ವ ಹಾಗೂ ಸಾಧನೆ ಕುರಿತು ಮಾತನಾಡಿ, ಅವರು ಉದಾತ್ತ ಗುಣದ ಉದಾರ ಚರಿತರಾಗಿದ್ದರು. ತಮ್ಮ ಸಹೋದ್ಯೋಗಿಗಳಲ್ಲಿ ನೈತಿಕ ಸ್ಥೈರ್ಯ, ಮನೋಬಲ ಹೆಚ್ಚಿಸಿ ಎಲ್ಲರೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸುವಂತೆ ಪ್ರೇರೇಪಿಸಿದರು. ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸುವ ಮನೋಬಲ ಅವರಲ್ಲಿತ್ತು. ಕುಟುಂಬ ವತ್ಸಲರಾದ ಅವರು ಮಾನವೀಯತೆಯ ಮೇರು ವ್ಯಕ್ತಿಗಳು ಎಂದು ಹೇಳಿದರು.

ಕ.ವಿ.ವ. ಸಂಘದ ಅಭಿವೃದ್ಧಿಗೆ ದಾಖಲಾರ್ಹ ಕೊಡುಗೆ
ಪ್ರೊ. ಬಿ. ವಿ. ಗುಂಜೆಟ್ಟಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಸಹ ಕಾರ್ಯದರ್ಶಿಗಳಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಕಾರ್ಯಾಧ್ಯಕ್ಷರಾಗಿ ಮಾಡಿದ ಕೆಲಸಗಳು ದಾಖಲಾರ್ಹ. ಸಂಘದ ಅಭಿವೃದ್ಧಿಯಲ್ಲಿ ಸಿಬ್ಬಂದಿಗಳೊಂದಿಗೆ ಎಲ್ಲರೊಳಗೊಂದಾಗಿ ಕೆಲಸ ಮಾಡಿ, ಕ.ವಿ.ವ. ಸಂಘದ ನೌಕರರಿಗೆ ಸೇವಾಭದ್ರತೆ ಒದಗಿಸುವಲ್ಲಿ ಅವರ ಶ್ರಮ ಅಧಿಕ. ಎಲ್ಲರನ್ನು ಸಮಭಾವದಿಂದ ಕಂಡು, ಎಲ್ಲರನ್ನು ಜೊತೆ ಗೂಡಿಸಿಕೊಂಡು ಹೋಗುವ ಅವರ ಗುಣ ಮೆಚ್ಚುವಂತಹದ್ದು. ಸರಳತೆ, ಶಿಸ್ತು, ಸಮಯ ಪ್ರಜ್ಞೆಯ ಸಾಕಾರ ಮೂರ್ತಿಯಾಗಿದ್ದ ಅವರು ಅಜಾತ ಶತ್ರುಗಳಾಗಿದ್ದರು ಎಂದು ಸಭೆಯಲ್ಲಿ ಸ್ಮರಿಸಲಾಯಿತು.

ಸಮಾರೋಪ ನುಡಿಗಳನ್ನಾಡಿದ ಕ.ವಿ.ವ. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅವರು, ಪ್ರೊ. ಬಿ. ವಿ. ಗುಂಜೆಟ್ಟಿ ಅವರು ಕ.ವಿ.ವ. ಸಂಘ ಹಾಗೂ ಕೆ.ಸಿ.ಡಿ.ಯಲ್ಲಿ ಆಡಳಿತಾತ್ಮಕ ಶಿಸ್ತು ತಂದವರು. ಶುದ್ಧಹಸ್ತರು ಆದ ಅವರು ಎಂದೂ ಪ್ರಚಾರ ಬಯಸಿದವರಲ್ಲ ಮತ್ತು ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಂಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪ್ರಭಾವತಿ ಗುಂಜೆಟ್ಟಿ ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಜಿ. ಎಸ್. ಅಂಗಡಿ, ಡಾ. ಸಂಜೀವ ಕುಲಕರ್ಣಿ, ಸತೀಶ ತುರಮರಿ, ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಅ. ಹಡಗಲಿ, ರವೀಂದ್ರ ಆಕಳವಾಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *