ಪ್ರಧಾನಿ ನರೇಂದ್ರ ಮೋದಿ ನ. 28ರಂದು ಉಡುಪಿ ಶ್ರೀ ಕೃಷ್ಣಮಠಕ್ಕೆ ಆಗಮನ: ಲಕ್ಷಕಂಠ ಗೀತಾ ಪಾರಾಯಣದಲ್ಲಿ ಭಾಗಿ

Spread the love

ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಅಧಿಕೃತ ವೇಳಾಪಟ್ಟಿ ಪ್ರಕಟ

ಉಡುಪಿ: ಶ್ರೀ ಕೃಷ್ಣಮಠದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಅಂಗವಾಗಿ ನವೆಂಬರ್ 28 ರಂದು ಆಯೋಜಿಸಲಾಗಿರುವ ಲಕ್ಷಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾಗವಹಿಸುವುದು ಅಧಿಕೃತವಾಗಿ ಖಚಿತಗೊಂಡಿದೆ. ಶನಿವಾರ ಪ್ರಧಾನ ಮಂತ್ರಿ ಕಾರ್ಯಾಲಯವು (PMO) ಈ ಸಂಬಂಧ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಧಾನ ಮಂತ್ರಿ ಕಾರ್ಯಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಹೆಲಿಪ್ಯಾಡ್ ಸೇರಿದಂತೆ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಭದ್ರತಾ ವ್ಯವಸ್ಥೆಗಾಗಿ ಆಯೋಜಕರು ಎಸ್‌ಪಿಜಿ (SPG) ಅಧಿಕಾರಿಗಳನ್ನು ಸಂಪರ್ಕಿಸುವಂತೆ ನಿರ್ದೇಶನ ನೀಡಲಾಗಿದೆ.

ಪ್ರಧಾನಿಯವರ ಅಧಿಕೃತ ಪ್ರವಾಸದ ವೇಳಾಪಟ್ಟಿ

​ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ: ಅವರು ಬೆಳಗ್ಗೆ 8:15 ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಪಡೆಯ ವಿಮಾನದಲ್ಲಿ ಹೊರಟು, 11:05 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿ, 11:35 ಕ್ಕೆ ಆದಿ ಉಡುಪಿ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ.

ಶ್ರೀ ಕೃಷ್ಣಮಠದಲ್ಲಿ ದರ್ಶನ ಮತ್ತು ಭಾಷಣ

​ಪ್ರಧಾನಿಯವರು ಮಧ್ಯಾಹ್ನ 12:00 ಗಂಟೆಗೆ ಶ್ರೀ ಕೃಷ್ಣಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ. ನಂತರ ಲಕ್ಷಕಂಠ ಗೀತಾ ಪಾರಾಯಣ ಸಮಾರಂಭದಲ್ಲಿ ಭಾಗಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಪ್ರಮುಖ ಕಾರ್ಯಕ್ರಮದ ಬಳಿಕ, ಮಧ್ಯಾಹ್ನ 1:30 ಕ್ಕೆ ಮಠದಿಂದ ಹೊರಟು, 1:45 ಕ್ಕೆ ಹೆಲಿಕಾಪ್ಟರ್ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.

ಗೋವಾದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿ

​ಮಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2:15 ಕ್ಕೆ ವಿಮಾನದಲ್ಲಿ ಗೋವಾದ ದಾಬೋಲಿಮ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ಅವರು ಗೋಕರ್ಣ ಪರ್ತಗಾಳಿ ಮಠದಲ್ಲಿ ಆಯೋಜಿಸಿರುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

Leave a Reply

Your email address will not be published. Required fields are marked *