
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಇಂದು ಸಂಜೆ ಭಾಷಣ ಮಾಡಲಿದ್ದು, ಅವರ ಮಾತುಗಳು ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿವೆ. ನಾಳೆಯಿಂದ ಹೊಸ ಜಿಎಸ್‌ಟಿ 2.0 ನಿಯಮಗಳು ಜಾರಿಗೆ ಬರುತ್ತಿರುವ ಕಾರಣ, ಈ ಭಾಷಣವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಪ್ರಧಾನಿಯವರು ತಮ್ಮ ಭಾಷಣದಲ್ಲಿ ಜಿಎಸ್‌ಟಿ ದರಗಳಲ್ಲಿನ ಬದಲಾವಣೆಗಳು ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಪರಿಕಲ್ಪನೆಯ ಕುರಿತು ಪ್ರಮುಖವಾಗಿ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ಅಮೆರಿಕದೊಂದಿಗಿನ ಸುಂಕ ವಿವಾದ ಹಾಗೂ H1B ವೀಸಾ ಶುಲ್ಕ ಹೆಚ್ಚಳದ ಬಗ್ಗೆಯೂ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು H1B ವೀಸಾ ಶುಲ್ಕವನ್ನು ಒಂದು ಲಕ್ಷ ಡಾಲರ್‌ಗೆ ಏರಿಸಿರುವ ನಿರ್ಧಾರದಿಂದ ಅಲ್ಲಿನ ಭಾರತೀಯ ಟೆಕ್ಕಿಗಳ ಮೇಲೆ ನೇರ ಪರಿಣಾಮ ಬೀರಲಿದೆ.
ಈ ವಿಷಯವನ್ನು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿ, ಟ್ರಂಪ್ ಆಡಳಿತಕ್ಕೆ ತಿರುಗೇಟು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸುಂಕ ಸಮರದಿಂದಾಗಿ ಹದಗೆಟ್ಟಿರುವ ಅಮೆರಿಕ-ಭಾರತ ಸಂಬಂಧದ ಕುರಿತು ಕೂಡ ಮೋದಿ ಅವರು ಮಾತನಾಡಬಹುದು ಎನ್ನಲಾಗಿದೆ. ಪ್ರಧಾನಿಯವರ ಈ ಭಾಷಣವು ದೇಶದ ಆರ್ಥಿಕ ಮತ್ತು ವಿದೇಶಾಂಗ ನೀತಿಗಳ ಮುಂದಿನ ಹಾದಿಯ ಬಗ್ಗೆ ಪ್ರಮುಖ ಸುಳಿವುಗಳನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.

