
ಕಾರವಾರ: ನ 29:ರಾಜ್ಯದಲ್ಲಿ ಭ್ರೂಣ ಹತ್ಯೆ ತಡೆಯಲು ಕೈಗೊಂಡ ಕ್ರಮಗಳು ಏನು? ಶಾಲಾ-ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆಗೆ ಕಡಿವಾಣ ಹಾಕಿ, ಅಪ್ರಾಪ್ತ ವಿದ್ಯಾರ್ಥಿಗಳ ವಾಹನ ಚಾಲನೆ ತಡೆಯಲು ಕ್ರಮ ಕೈಗೊಳ್ಳಿ ಹಾಗೂ ಮದ್ಯ ಮುಕ್ತ ರಾಜ್ಯವನ್ನಾಗಿ ಏಕೆ ಮಾಡುವುದಿಲ್ಲ? – ಇಂತಹ ಹತ್ತಾರು ಗಂಭೀರ ಪ್ರಶ್ನೆಗಳು ಮತ್ತು ಸಲಹೆಗಳ ಮಹಾಪೂರವನ್ನು ಅಂಕೋಲಾದ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಎದುರು ಹರಿಯಬಿಟ್ಟರು.
ಅಂಕೋಲಾದ ಪಿ.ಎಂ. ಹೈಸ್ಕೂಲ್‌ನಲ್ಲಿ ಶನಿವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ಆರ್.ಟಿ.ಇ ಕುರಿತು ಅಹವಾಲು ಸ್ವೀಕಾರ ಹಾಗೂ ಮಕ್ಕಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅಂಕೋಲಾ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ದೌರ್ಜನ್ಯ ಮತ್ತು ಭ್ರೂಣ ಹತ್ಯೆ ಕುರಿತು ಪ್ರಶ್ನೆ:
ವಿದ್ಯಾರ್ಥಿನಿ ಸುಶ್ಮಿತಾ ನಾಯಕ್ ಅವರು ವಿದ್ಯಾರ್ಥಿನಿಯರ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಕೈಗೊಂಡ ಕ್ರಮಗಳ ಕುರಿತು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಅವರು, ರಾಜ್ಯದಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ನಿಯಂತ್ರಿಸಲು ‘ಅಕ್ಕಪಡೆ’ಯನ್ನು ರಚಿಸಲಾಗಿದೆ ಎಂದು ತಿಳಿಸಿದರು. ದೌರ್ಜನ್ಯ ಸಂದರ್ಭದಲ್ಲಿ ಪೊಲೀಸ್ ಸಹಾಯವಾಣಿ (112) ಮತ್ತು ಮಕ್ಕಳ ಸಹಾಯವಾಣಿ (1098) ಗಳಲ್ಲಿ ಯಾವುದು ತುರ್ತಾಗಿ ಸ್ಪಂದಿಸಲಿದೆ ಎಂಬ ಪ್ರಶ್ನೆಗೆ, ಎರಡೂ ತುರ್ತು ಸಹಾಯವಾಣಿಗಳಿಗೆ ದೂರುಗಳನ್ನು ಸಲ್ಲಿಸಬಹುದು ಎಂದು ಹೇಳಿದರು.

ಭ್ರೂಣ ಹತ್ಯೆ ತಡೆಯುವ ಕ್ರಮಗಳೇನು ಎಂಬ ವಿದ್ಯಾರ್ಥಿನಿ ನಾಗೇಶ್ವರಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿಗಳು, ಭ್ರೂಣ ಹತ್ಯೆಗೆ ವಿಧಿಸಲಾಗುವ ಶಿಕ್ಷೆ ಮತ್ತು ದಂಡದ ಕುರಿತು ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಳ ಮುಂಭಾಗದಲ್ಲಿ ಜಾಗೃತಿ ಫಲಕಗಳನ್ನು ಅಳವಡಿಸಲಾಗಿದ್ದು, ಆರೋಗ್ಯ ಇಲಾಖೆಯಿಂದ ಅನಿರೀಕ್ಷಿತ ತಪಾಸಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಭ್ರೂಣ ಹತ್ಯೆ ಮಾಡುವವರ ಬಗ್ಗೆ ನಿಖರ ಮಾಹಿತಿ ನೀಡುವವರಿಗೆ ₹1 ಲಕ್ಷ ಬಹುಮಾನ ನೀಡುವ ಜೊತೆಗೆ ಅವರ ಹೆಸರನ್ನು ಗೋಪ್ಯವಾಗಿಡಲಾಗುವುದು ಎಂದು ಡಾ.ತಿಪ್ಪೇಸ್ವಾಮಿ ತಿಳಿಸಿದರು.
ಪೋಕ್ಸೋ, ಮಾದಕ ವಸ್ತು, ಮತ್ತು ಮದ್ಯಪಾನ ನಿಷೇಧ:
ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ಕೇಳಿದ ವಿದ್ಯಾರ್ಥಿನಿಗೆ ಉತ್ತರಿಸಿದ ಆಯೋಗದ ಸದಸ್ಯರು, 18 ವರ್ಷದೊಳಗಿನ ಮಕ್ಕಳನ್ನು ಸೇಫ್ ಮತ್ತು ಅನ್ ಸೇಫ್ ಟಚ್ ಮಾಡುವ ಕುರಿತು ವಿವರಿಸಿದರು. ಅನ್ ಸೇಫ್ ಟಚ್‌ಗಳು ಪೋಕ್ಸೋ ಕಾಯ್ದೆಯಡಿ ಬರಲಿದ್ದು, ಶಾಲೆಗಳಲ್ಲಿ ಇಂತಹ ಪ್ರಕರಣಗಳನ್ನು ಮುಚ್ಚಿಡುವ ಶಿಕ್ಷಕರು ಅಥವಾ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಾಲಾ ಕಾಲೇಜು ಆವರಣದಲ್ಲಿ ಮಾದಕ ವಸ್ತುಗಳ ಬಳಕೆ ಮಾಡುವವರ ವಿರದ್ಧ ಕ್ರಮಕ್ಕೆ ವಿದ್ಯಾರ್ಥಿ ಅಭಿನವ ಶೆಟ್ಟಿ ಕೋರಿದರು. ಶಾಲಾ ಕಾಲೇಜುಗಳ 100 ಮೀಟರ್ ಆವರಣದಲ್ಲಿ ತಂಬಾಕು ಮತ್ತು ಮಾದಕ ವಸ್ತುಗಳ ಮಾರಾಟ ನಿಷೇಧವಿದ್ದು, ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಶಾಲೆಗಳಲ್ಲಿ ಅಳವಡಿಸಿರುವ ಕ್ಯೂ.ಆರ್. ಕೋಡ್ ಮೂಲಕ ಮಾಹಿತಿ ನೀಡಬಹುದು ಎಂದು ಅಂಕೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ತಿಳಿಸಿದರು.
ಮದ್ಯ ಮುಕ್ತ ರಾಜ್ಯ ಏಕೆ ಮಾಡುವುದಿಲ್ಲ ಎಂಬ ಅಮೂಲ್ಯ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಡಾ.ತಿಪ್ಪೇಸ್ವಾಮಿ, ಮದ್ಯ ಮಾರಾಟಕ್ಕೆ ಅನೇಕ ನಿಬಂಧನೆ ಮತ್ತು ನಿಯಂತ್ರಣ ಕ್ರಮಗಳಿವೆ. ಅಕ್ರಮ ಮಾರಾಟಕ್ಕೂ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಇದನ್ನು ಬಿಡಬೇಕು. ಸಂಪೂರ್ಣ ಮದ್ಯ ನಿಷೇಧ ಸರ್ಕಾರಿ ಮಟ್ಟದಲ್ಲಿ ನಡೆಯಬೇಕಿದೆ ಎಂದು ಸ್ಪಷ್ಟಪಡಿಸಿದರು.

ಬಾಲ ಕಾರ್ಮಿಕ, ವಾಹನ ಚಾಲನೆ ಕುರಿತು ಕ್ರಮ:
ಅಪ್ರಾಪ್ತ ವಿದ್ಯಾರ್ಥಿಗಳ ವಾಹನ ಚಾಲನೆ ಬಗ್ಗೆ ನಯನ ಪ್ರಭು ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ತಿಪ್ಪೇಸ್ವಾಮಿ, ಅಪ್ರಾಪ್ತರಿಗೆ ವಾಹನ ನೀಡಿದಲ್ಲಿ ಅವರ ಪೋಷಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಲೇಜು ಪ್ರಾಂಶುಪಾಲರು ಮತ್ತು ಪೋಷಕರು ಈ ಬಗ್ಗೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಬೇಕು. ಮಕ್ಕಳ ಹಕ್ಕುಗಳ ಕುರಿತ ವಿವಿಧ ಯೋಜನೆಗಳ ವಿವರಗಳನ್ನು www.makkalahakku.com ನಲ್ಲಿ ಪಡೆಯಬಹುದು ಎಂದು ಹೇಳಿದರು. ಬಾಲ ಕಾರ್ಮಿಕ ಪದ್ಧತಿ ತಡೆಯುವ ಬಗ್ಗೆ, ಆಧಾರ್ ಕಾರ್ಡ್ ಮಾಡಿಸಲು ಎದುರಿಸುವ ತೊಂದರೆಗಳು, ಕಾಲೇಜುಗಳಲ್ಲಿ ಕರಾಟೆ ತರಬೇತಿ ಹಾಗೂ ಮೂಲ ಸೌಕರ್ಯಗಳ ಕೊರತೆ ಕುರಿತು ವಿದ್ಯಾರ್ಥಿಗಳು ಗಮನ ಸೆಳೆದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ., ದೇಶದ ಜನಸಂಖ್ಯೆಯಲ್ಲಿ ಶೇ. 40ಕ್ಕೂ ಅಧಿಕ 18 ವರ್ಷದೊಳಗಿನ ಮಕ್ಕಳಿದ್ದು, ಅವರ ಅಭಿಪ್ರಾಯ ಮತ್ತು ಸಮಸ್ಯೆಗಳನ್ನು ಆಲಿಸುವುದು ಉತ್ತಮ ಪ್ರಜಾಪ್ರಭುತ್ವದ ಲಕ್ಷಣ. ಇಂದಿನ ಮಕ್ಕಳೇ, ಇಂದಿನ ಪ್ರಜೆಗಳು, ಅವರ ಸರ್ವತೋಮುಖ ವಿಕಾಸಕ್ಕೆ ಎಲ್ಲಾ ಅವಕಾಶ ನೀಡುವ ಜೊತೆಗೆ ಅವರ ಹಕ್ಕುಗಳನ್ನು ರಕ್ಷಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಂಕೋಲಾ ತಹಸೀಲ್ದಾರ್ ಡಾ.ಚಿಕ್ಕಪ್ಪ ನಾಯ್ಕ್ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಅನುಷ್ಠಾನಾಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕು. ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮಗಳನ್ನು ಅಧ್ಯಯನದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಂಕೋಲಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಮಠಪತಿ, ತಾಲೂಕು ಆರೋಗ್ಯಾಧಿಕಾರಿ ಡಾ.ಜಗದೀಶ್ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆಯ ಕುಮಾರ್, ಪಿ.ಎಂ. ಹೈಸ್ಕೂಲ್‌ನ ಮುಖ್ಯೋಪಾಧ್ಯಾಯ ಚಂದ್ರಶೇಖರ್ ಕಡೀಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ನಾಯಕ್ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

