
ಮೈಸೂರು: ರಾಷ್ಟ್ರಪತಿ ದೌಪದಿ ಮುರ್ಮು ಅವರು ಸೆಪ್ಟೆಂಬರ್ 1 ಮತ್ತು 2ರಂದು ಮೈಸೂರಿಗೆ ಭೇಟಿ ನೀಡಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನಗರದಲ್ಲಿ ವಾಸ್ತವ್ಯ ಹೂಡಿದ್ದು, ಗಣ್ಯರ ಸಂಚಾರದಿಂದಾಗಿ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
ಸೆಪ್ಟೆಂಬರ್ 1ರಂದು ಮಧ್ಯಾಹ್ನ 3.10ರ ಸುಮಾರಿಗೆ ರಾಷ್ಟ್ರಪತಿಯವರು ಮಂಡಕಳ್ಳಿ ವಿಮಾನನಿಲ್ದಾಣಕ್ಕೆ ಬಂದಿಳಿದರು. ಅವರನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು. ನಂತರ, ಅವರು ಮಾನಸಗಂಗೋತ್ರಿಯ ನೈಮಿಶಮ್ ಕ್ಯಾಂಪಸ್‌ನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಗೆ ತೆರಳಿ, ಅಲ್ಲಿ ನಡೆದ ‘ವಜ್ರ ಮಹೋತ್ಸವ’ ಸಮಾರಂಭದಲ್ಲಿ ಭಾಗವಹಿಸಿದರು.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಮತ್ತು ಮಾಧ್ಯಮದವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ರಾತ್ರಿ 8 ಗಂಟೆಗೆ ಚಾಮುಂಡಿಬೆಟ್ಟಕ್ಕೆ ತೆರಳಿದ ರಾಷ್ಟ್ರಪತಿಯವರು, ಚಾಮುಂಡೇಶ್ವರಿ ದೇವಿ ದರ್ಶನ ಮತ್ತು ವಿಶೇಷ ಪೂಜೆ ಸಲ್ಲಿಸಿ, ಹೋಟೆಲ್‌ಗೆ ಮರಳಿ ವಾಸ್ತವ್ಯ ಹೂಡಿದರು.
ಸೆಪ್ಟೆಂಬರ್ 2ರಂದು ಬೆಳಿಗ್ಗೆ 8.30ರ ಸುಮಾರಿಗೆ ರಾಷ್ಟ್ರಪತಿಯವರು ಮೈಸೂರು ಅರಮನೆಗೆ ಭೇಟಿ ನೀಡಲಿದ್ದಾರೆ. ಅಲ್ಲಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಕುಟುಂಬದೊಂದಿಗೆ ಉಪಾಹಾರ ಸೇವಿಸುವರು. ಬೆಳಿಗ್ಗೆ 10.20ರ ಸುಮಾರಿಗೆ ಮಂಡಕಳ್ಳಿ ವಿಮಾನನಿಲ್ದಾಣದಿಂದ ಅವರು ದೆಹಲಿಗೆ ತೆರಳಲಿದ್ದಾರೆ.
ರಾಷ್ಟ್ರಪತಿಯವರು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಭದ್ರತೆಗಾಗಿ 435 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಗರದ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ, ವಿಭಜಕಗಳಿಗೆ ಸುಣ್ಣ-ಬಣ್ಣ ಬಳಿದು ಅಲಂಕರಿಸಲಾಗಿದೆ. ಸೋಮವಾರ ಮಧ್ಯಾಹ್ನದಿಂದ ರಾತ್ರಿಯವರೆಗೆ ಚಾಮುಂಡಿಬೆಟ್ಟಕ್ಕೆ ಮತ್ತು ಮಂಗಳವಾರ ಮಧ್ಯಾಹ್ನದವರೆಗೆ ಅರಮನೆಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.
ರಾಷ್ಟ್ರಪತಿಯವರು ಮೈಸೂರಿಗೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಅವರು 2022ರ ಸೆಪ್ಟೆಂಬರ್ 26ರಂದು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ಆಗಮಿಸಿದ್ದರು.

