ಬೆಂಗಳೂರ:ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಕೆಲಸ

Spread the love

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಲೈಬ್ರರಿ ಕ್ಲರ್ಕ್ ಕೆಲಸ

ಬೆಂಗಳೂರು: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕೊನೆಗೂ ಜೈಲಿನೊಳಗೆ ಕೆಲಸ ಹಂಚಿಕೆಯಾಗಿದೆ.

ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪ್ರಜ್ವಲ್ ರೇವಣ್ಣ ಇದೀಗ ಜೈಲಿನ ಗ್ರಂಥಾಲಯದಲ್ಲಿ ಕ್ಲರ್ಕ್ (ಸಹಾಯಕ) ಕೆಲಸ ಮಾಡುತ್ತಿದ್ದಾರೆ. ಕೈದಿಗಳಿಗೆ ಪುಸ್ತಕ ವಿತರಿಸುವುದು ಹಾಗೂ ಯಾವ ಪುಸ್ತಕ ಯಾರಿಗೆ ನೀಡಲಾಗಿದೆ ಎಂಬುದನ್ನು ನೋಂದಣಿಯಲ್ಲಿ ದಾಖಲಿಸುವ ಜವಾಬ್ದಾರಿ ಅವರಿಗೆ ನೀಡಲಾಗಿದೆ.

ಸುದ್ದಿ ಮೂಲಗಳ ಪ್ರಕಾರ, ಈಗಾಗಲೇ ಒಂದು ದಿನ ಲೈಬ್ರರಿಯಲ್ಲಿ ಕೆಲಸ ನಿರ್ವಹಿಸಿರುವ ಪ್ರಜ್ವಲ್ ರೇವಣ್ಣಗೆ ದಿನಕ್ಕೆ 52 ರೂ. ಕೂಲಿ ನೀಡಲಾಗಿದೆ. ದಿನದ ಕೆಲಸ ಪೂರ್ಣಗೊಳಿಸಿದರೆ ಮಾತ್ರ ಕೂಲಿ ದೊರೆಯುತ್ತದೆ. ವಾರದಲ್ಲಿ ಮೂರು ದಿನ, ತಿಂಗಳಿಗೆ 12 ದಿನ ಶ್ರಮದಾನ ಮಾಡುವುದು ಕಡ್ಡಾಯ.

ಸದ್ಯ ವಿಚಾರಣಾ ಕೋರ್ಟ್ ಹಾಜರಿ ಹಾಗೂ ವಕೀಲರ ಜತೆ ಚರ್ಚೆಗಳಲ್ಲಿ ತೊಡಗಿಸಿಕೊಂಡಿರುವ ಕಾರಣ, ಪೂರ್ಣಕಾಲಿಕವಾಗಿ ಲೈಬ್ರರಿ ಕ್ಲರ್ಕ್ ಆಗಿ ಕೆಲಸ ನಿರ್ವಹಿಸುತ್ತಿಲ್ಲ. ಆದರೂ, ಜೈಲು ಆಡಳಿತದ ನಿಯಮಾವಳಿಯಂತೆ ಮುಂದಿನ ದಿನಗಳಲ್ಲಿ ಈ ಕೆಲಸದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ.

ಜೈಲು ನಿಯಮಾವಳಿಯ ಪ್ರಕಾರ, ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರತಿಯೊಬ್ಬ ಕೈದಿಗೂ ಯಾವುದಾದರೂ ಕೆಲಸ ಹಂಚಿಕೆ ಮಾಡಲಾಗುತ್ತದೆ. ಕೈದಿಯ ಅರ್ಹತೆ ಮತ್ತು ಆಸಕ್ತಿಗೆ ತಕ್ಕಂತೆ ಈ ಹಂಚಿಕೆ ನಡೆಯುತ್ತದೆ. ಪ್ರಜ್ವಲ್ ರೇವಣ್ಣ ತಾನು ಕೃಷಿ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ಮಾಡುವ ಆಸಕ್ತಿ ವ್ಯಕ್ತಪಡಿಸಿದ್ದರೂ, ಅಂತಿಮವಾಗಿ ಜೈಲು ಆಡಳಿತವು ಅವರಿಗೆ ಲೈಬ್ರರಿ ಕ್ಲರ್ಕ್ ಕೆಲಸವನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *