ರಾಜ್ಯ ರಾಜಕೀಯದಲ್ಲಿ ಸಂಚಲನ: ಸಿದ್ದರಾಮಯ್ಯ ಸರ್ಕಾರಕ್ಕೆ ‘ಮೇಜರ್ ಸರ್ಜರಿ’ ಸುಳಿವು!ಎರಡೂವರೆ ವರ್ಷದ ಆಡಳಿತ ಪೂರ್ಣ: 25 ಸಚಿವರಿಗೆ ಕೊಕ್‌ ನೀಡುವ ಗುಮಾನಿ; ನವೆಂಬರ್‌ನಲ್ಲಿ ಸಂಪುಟ ಪುನರ್‌ರಚನೆಗೆ ಚಿಂತನೆ

Spread the love


ರಾಜ್ಯ ರಾಜಕೀಯದಲ್ಲಿ ಸಂಚಲನ: ಸಿದ್ದರಾಮಯ್ಯ ಸರ್ಕಾರಕ್ಕೆ ‘ಮೇಜರ್ ಸರ್ಜರಿ’ ಸುಳಿವು!

ಎರಡೂವರೆ ವರ್ಷದ ಆಡಳಿತ ಪೂರ್ಣ: 25 ಸಚಿವರಿಗೆ ಕೊಕ್‌ ನೀಡುವ ಗುಮಾನಿ; ನವೆಂಬರ್‌ನಲ್ಲಿ ಸಂಪುಟ ಪುನರ್‌ರಚನೆಗೆ ಚಿಂತನೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದು ಎರಡೂವರೆ ವರ್ಷದತ್ತ ಸಾಗುತ್ತಿರುವ ಹಿನ್ನೆಲೆ­ಯಲ್ಲಿ, ಸಚಿವ ಸಂಪುಟವನ್ನು ಪುನರ್‌ರಚನೆ ಮಾಡಿ ಆಡಳಿತ ಯಂತ್ರಕ್ಕೆ ಹೊಸ ಚುರುಕು ನೀಡುವ ಗಂಭೀರ ಚಿಂತನೆ ನಡೆದಿದೆ. ಮೂಲಗಳ ಪ್ರಕಾರ, ಸರ್ಕಾರಕ್ಕೆ ‘ಮೇಜರ್ ಸರ್ಜರಿ’ ನಡೆಸುವ ಯೋಜನೆಯಿದ್ದು, ಹಾಲಿ ಇರುವ 15 ರಿಂದ ಗರಿಷ್ಠ 25 ಮಂದಿ ಸಚಿವರನ್ನು ಬದಲಾಯಿಸಿ, ಹೊಸ ಮತ್ತು ಉತ್ಸಾಹಿ ಮುಖಗಳಿಗೆ ಅವಕಾಶ ಕಲ್ಪಿಸುವ ಸಾಧ್ಯತೆ ದಟ್ಟವಾಗಿದೆ.

ಸಿದ್ದರಾಮಯ್ಯ ಸರ್ಕಾರವು ನವೆಂಬರ್ ಅಂತ್ಯದೊಳಗೆ ಅಥವಾ ಬಿಹಾರ ವಿಧಾನಸಭೆ ಚುನಾವಣೆಯ ಬಳಿಕ ಸಚಿವ ಸಂಪುಟ ಪುನರ್‌ರಚನೆಗೆ ಮುಂದಾಗಲಿದೆ ಎಂದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಆಡಳಿತಕ್ಕೆ ಬಂದ ಹೊಸತರಲ್ಲಿಯೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಆಗಿರುವ ಒಪ್ಪಂದದ ಪ್ರಕಾರ, ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಅವರದ್ದಾಗಿದ್ದು, ನವೆಂಬರ್‌ನಲ್ಲಿ ಎರಡೂವರೆ ವರ್ಷದ ಅವಧಿ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ, ಸಂಪುಟ ಪುನರ್‌ರಚನೆಯು ಅನಿವಾರ್ಯವಾಗಿದೆ.

ಸಂಪುಟ ಬದಲಾವಣೆಗೆ ಕಾರಣ ಮತ್ತು ಸಿಎಂ ನಡೆ

ಸಚಿವ ಸಂಪುಟಕ್ಕೆ ‘ಶಸ್ತ್ರಚಿಕಿತ್ಸೆ’ ನಡೆಸಲು ಪ್ರಮುಖ ಕಾರಣಗಳು ಕೇಳಿಬರುತ್ತಿವೆ. ಆಡಳಿತಕ್ಕೆ ಬಲ ತುಂಬಲು ಹೊಸಬರ ಸೇರ್ಪಡೆ ಮುಖ್ಯವಾಗಿದೆ. ಅಲ್ಲದೇ, ಕೆಲವು ಹಾಲಿ ಸಚಿವರ ಕಾರ್ಯವೈಖರಿ, ದಕ್ಷತೆ ಮತ್ತು ಇಲಾಖಾ ಕೆಲಸಗಳ ಬಗ್ಗೆ ಶಾಸಕರಿಂದಲೇ ದೂರುಗಳು ಕೇಳಿಬಂದಿರುವ ಹಿನ್ನೆಲೆ­ಯಲ್ಲಿ ಈ ಬದಲಾವಣೆ ಅನಿವಾರ್ಯವಾಗಿದೆ ಎನ್ನಲಾಗಿದೆ. ಈಗಾಗಲೇ ಹೈಕಮಾಂಡ್‌ ಮಟ್ಟಕ್ಕೂ ಕೆಲ ಸಚಿವರ ಕುರಿತು ದೂರುಗಳು ಹೋಗಿರುವ ಕಾರಣ, ಬದಲಾವಣೆ ಮಾಡುವಂತೆ ಸೂಚನೆ ಬಂದಿದೆ ಎನ್ನಲಾಗಿದೆ.

ಸಚಿವ ಸಂಪುಟ ಪುನರ್‌ರಚನೆಯ ಸುಳಿವು ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ತಿಂಗಳ 13ರಂದು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಔತಣಕೂಟ ಆಯೋಜಿಸಿದ್ದಾರೆ. ಅಧಿಕೃತವಾಗಿ ಇದನ್ನು ದೀಪಾವಳಿ ಸಭೆ ಎಂದು ಹೇಳಲಾಗಿದ್ದರೂ, ಈ ಸಂದರ್ಭದಲ್ಲಿ ಸಂಪುಟ ಪುನರ್‌ರಚನೆ ಸೇರಿದಂತೆ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.

ಸದ್ಯ ಬಿ. ನಾಗೇಂದ್ರ ಮತ್ತು ಕೆ.ಎನ್‌. ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿರುವ ಎರಡು ಸ್ಥಾನಗಳು ಸೇರಿದಂತೆ, ಒಟ್ಟು 34 ಸಚಿವರ ಸಾಮರ್ಥ್ಯದ ಸಂಪುಟದಲ್ಲಿ 10 ರಿಂದ 15 ಮಂದಿಯನ್ನು ಕೈಬಿಟ್ಟು ಪ್ರಾದೇಶಿಕ ಮತ್ತು ಸಾಮಾಜಿಕ ಸಮತೋಲನಕ್ಕೆ ಆದ್ಯತೆ ನೀಡುವ ಮೂಲಕ ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿದೆ ಎನ್ನಲಾಗಿದೆ. ಇದರಿಂದಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹಿರಿಯ ಸಚಿವ ಜಿ. ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿ, ಸಂಪುಟ ಪುನರ್‌ರಚನೆಯ ಕುರಿತು ತಮ್ಮಗೆ ಯಾವುದೇ ಮಾಹಿತಿ ಇಲ್ಲ. ಈ ನಿರ್ಧಾರವನ್ನು ಹೈಕಮಾಂಡ್‌ ಮತ್ತು ಮುಖ್ಯಮಂತ್ರಿಯವರ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಆದಾಗ್ಯೂ, ಈ ಬೆಳವಣಿಗೆಗಳು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿವೆ.


Leave a Reply

Your email address will not be published. Required fields are marked *