ಸಮುದಾಯ ಒಗ್ಗಟ್ಟಾದರೆ ಮಾತ್ರ ರಾಜಕೀಯ ಶಕ್ತಿ: ಸಚಿವ ಸಂತೋಷ್ ಲಾಡ್

Spread the love

ಮೈಸೂರು: ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗೊತ್ತಿ ಸಮುದಾಯ ಒಗ್ಗಟ್ಟಾದರೆ ಮಾತ್ರ ರಾಜಕೀಯ ಶಕ್ತಿ ಪಡೆಯಲು ಸಾಧ್ಯ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ಕಲಾಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಆಯೋಜಿಸಿದ್ದ ‘ನುಲಿಯ ಚಂದಯ್ಯ’ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಅಲೆಮಾರಿ ಸಮುದಾಯಗಳ ಬೇಡಿಕೆಗಳಿಗೆ ಸರ್ಕಾರವು ಸದಾ ಸ್ಪಂದಿಸಲಿದೆ. ಸಮುದಾಯಗಳ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ಕೊರಮ, ಕೊರಚ ಸೇರಿದಂತೆ ತಳ ಸಮುದಾಯದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಐಎಎಸ್, ಕೆಎಎಸ್‌ನಂತಹ ನಾಗರಿಕ ಸೇವೆಗಳಿಗೆ ಹೋಗುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ಅವರು ಕರೆ ನೀಡಿದರು. ಶೋಷಿತ ಸಮುದಾಯಗಳ ಜೊತೆ ಸರ್ಕಾರವು ಸದಾ ಬೆಂಬಲವಾಗಿ ನಿಂತಿದೆ. ಪರಿಶಿಷ್ಟರು ಮತ್ತು ಹಿಂದುಳಿದ ಸಮುದಾಯಗಳಿಗೆ ಕಾರ್ಮಿಕ ಇಲಾಖೆಯು ಸಹಕಾರ ನೀಡುತ್ತಿದೆ. ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಿ ಎಲ್ಲ ಸೇವೆಗಳು ತಲುಪುವಂತೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕ ವಿ.ಕಿರಣ್‌ಕುಮಾರ್ ಕೊತ್ತಗೆರೆ, ಕೊರಮ ಮತ್ತು ಕೊರಚರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಸಮುದಾಯದಿಂದ ಒಬ್ಬ ಶಾಸಕರೂ ಇಲ್ಲದೆ ರಾಜಕೀಯ ಪ್ರಾತಿನಿಧ್ಯದ ಕೊರತೆ ಎದುರಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ‘ಅಪರಾಧಿ ಬುಡಕಟ್ಟುಗಳು’ ಎಂದು ಸಮುದಾಯದ ಅಸ್ತಿತ್ವವನ್ನೇ ಇಲ್ಲದಂತೆ ಮಾಡಿದ್ದರು. ಇಂದಿಗೂ ಅನೇಕರಿಗೆ ಸೂರು ಮತ್ತು ಉದ್ಯೋಗದ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಸಿ.ಎನ್. ಮಂಜೇಗೌಡ, ಶಾಸಕ ಅನಿಲ್ ಚಿಕ್ಕಮಾದು, ಹೆಚ್ಚುವರಿ ಜಿಲ್ಲಾಧಿಕಾರಿ ಪಿ. ಶಿವರಾಜ್, ಶ್ರೀಕಂಠ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *