
ಬೆಳ್ತಂಗಡಿ: ದೇಶದಲ್ಲಿ ಬಹುಸಂಖ್ಯಾತರ ವಿರುದ್ಧ ಸದಾ ಕಾಲ ಷಡ್ಯಂತ್ರ ನಡೆಸುತ್ತಲೇ ಬಂದಿರುವ ಕಾಂಗ್ರೆಸ್ ಪಕ್ಷ, ಧರ್ಮಸ್ಥಳ ಪ್ರಕರಣವನ್ನು ಅದಕ್ಕಾಗಿಯೇ ಬಳಸಿಕೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದ್ದಾರೆ. ಮೋದಿ ಸರ್ಕಾರ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಧರ್ಮಸ್ಥಳ ಚಲೋ’ ಹಾಗೂ ‘ಸಮಾಜ ಜಾಗೃತಿ’ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಧರ್ಮಸ್ಥಳಕ್ಕೆ ಕೇವಲ ಒಂದು ವರ್ಗದವರು ಬರುವುದಿಲ್ಲ. ಎಲ್ಲಾ ವರ್ಗದವರೂ, ಅದರಲ್ಲೂ ವಿಶೇಷವಾಗಿ ಹಿಂದುಳಿದ ವರ್ಗದವರು, ಅಣ್ಣಪ್ಪ ಸ್ವಾಮಿಗೆ ನಮಸ್ಕರಿಸಿ, ಮಂಜುನಾಥೇಶ್ವರನಿಗೆ ಮುಡಿ ನೀಡಿ ಹೋಗುವ ಸಂಪ್ರದಾಯ ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಆದರೆ, ‘ಬುರುಡೆ ಪ್ರಕರಣದ’ ನೆಪದಲ್ಲಿ ಹಿಂದೂ ಸಮಾಜವನ್ನು ಒಡೆಯುವ ಷಡ್ಯಂತ್ರ ಧರ್ಮಸ್ಥಳ ಪ್ರಕರಣದಲ್ಲಿ ಅಡಗಿದೆ ಎಂದು ಹಿಂದೂಗಳನ್ನು ಎಚ್ಚರಿಸಿದರು.
ಕ್ಷೇತ್ರದ ಪ್ರಭಾವ ಕುಗ್ಗಿಸುವ ಯತ್ನ
ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯ ಪ್ರಭಾವ ಕುಗ್ಗಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಹಿಂದೂಗಳಲ್ಲಿ ಕ್ಷೇತ್ರದ ಮೇಲಿರುವ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯನ್ನು ಕಡಿಮೆ ಮಾಡುವುದೇ ಈ ಷಡ್ಯಂತ್ರದ ಉದ್ದೇಶವಾಗಿದೆ ಎಂದು ಸಚಿವ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ಯಾವ ಕಾರಣಕ್ಕೆ ಎಸ್‌ಐಟಿ?
ಧರ್ಮಸ್ಥಳ ಪ್ರಹಸನದಲ್ಲಿ ಸರ್ಕಾರ ಯಾವ ಕಾರಣಕ್ಕೆ ಎಸ್‌ಐಟಿ ರಚನೆ ಮಾಡಿತು? ಎಂದು ಪ್ರಶ್ನಿಸಿದ ಅವರು, ಮೊದಲು ‘ಬುರುಡೆ’ ತಂದವನನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕಿತ್ತು. ಎಲ್ಲಿಂದ ಅದನ್ನು ತಂದ ಎಂದು ಬಾಯಿ ಬಿಡಿಸಿದ್ದರೆ ಅಲ್ಲೇ ಸತ್ಯದ ದರ್ಶನವಾಗುತ್ತಿತ್ತು. ಇಷ್ಟೆಲ್ಲಾ ‘ಹೈಡ್ರಾಮಾ’ ಏಕೆ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಬೇರೆ ಶ್ರದ್ಧಾ ಕೇಂದ್ರ ಅಗೆಸಿ ತಾಕತ್ತಿದ್ದರೆ!
ರಾಜ್ಯ ಸರ್ಕಾರ ‘ಬುರುಡೆ’ ತಂದವನ ಬಗ್ಗೆ ಯಾವುದೇ ವಿಚಾರಣೆ ನಡೆಸದೆ, ತರಾತುರಿಯಲ್ಲಿ ಎಸ್‌ಐಟಿ ರಚಿಸಿ, ಮೂರು ಹಿರಿಯ ಅಧಿಕಾರಿಗಳನ್ನು ನಿಯೋಜಿಸಿ ‘ಬಾಹುಬಲಿ ಬೆಟ್ಟ’ ಅಗೆಸಿದೆ. ತಾಕತ್ತಿದ್ದರೆ ಬೇರೆ ಶ್ರದ್ಧಾ ಕೇಂದ್ರಗಳನ್ನೂ ಹೀಗೇ ಅಗೆಸಿ ನೋಡೋಣ ಎಂದು ಪ್ರಹ್ಲಾದ ಜೋಶಿ ಸರ್ಕಾರಕ್ಕೆ ನೇರ ಸವಾಲು ಹಾಕಿದರು.
‘ಧರ್ಮಸ್ಥಳ’ದಂತಹ ಹಿಂದೂ ಧಾರ್ಮಿಕ ಪರಂಪರೆಯುಳ್ಳ ಕ್ಷೇತ್ರವನ್ನು ಯಾರದ್ದೋ ಮಾತಿಗೆ ಕಿವಿಗೊಟ್ಟು 17 ಜಾಗಗಳಲ್ಲಿ ಅಗೆದರೂ ಸಮಾಧಾನ ಆಗಲಿಲ್ಲ. ಜನರು ಛೀ ಥೂ ಎಂದು ಉಗಿದ ಮೇಲೆ ಕೈ ಬಿಟ್ಟಿತು. ಹಾಗಾದರೆ ಕಾಂಗ್ರೆಸ್ ಸರ್ಕಾರದ ಬುರುಡೆಯಲ್ಲಿ ಏನಿದೆ? ಎಂದು ಪ್ರಶ್ನಿಸಿದರು.
ಹಿಂದೂ ತಿರಸ್ಕಾರ ಕಾಂಗ್ರೆಸ್ ರಕ್ತದಲ್ಲೇ ಇದೆ
ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಿಂದೂಗಳ ವಿರುದ್ಧ ಮತ್ತು ತುಷ್ಟೀಕರಣದ ಪರವಾಗಿದೆ. ಸದಾ ಕಾಲ ಹಿಂದೂ ಸಮಾಜವನ್ನು ತಿರಸ್ಕರಿಸುವುದು ಮತ್ತು ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವುದು ಕಾಂಗ್ರೆಸ್ ರಕ್ತದಲ್ಲೇ ಬಂದಿದೆ. ಇದು ಡಿಕೆಶಿ ಅವರು ದಸರಾ ಉದ್ಘಾಟನೆಗೆ ಮೌಲಾ ಅಜಾದ್‌ರನ್ನು ಆಹ್ವಾನಿಸುವುದರಿಂದಲೇ ಸ್ಪಷ್ಟವಾಗಿದೆ ಎಂದು ಜೋಶಿ ಗುಡುಗಿದರು.
ಬಾನು ಮುಸ್ತಾಕ್ ವಿರುದ್ಧ ವಾಗ್ದಾಳಿ
ಮೈಸೂರು ದಸರಾ ಉದ್ಘಾಟನೆಗೆ ಮುಂದಾಗಿರುವ ಬಾನು ಮುಸ್ತಾಕ್, ಮೊದಲು ‘ಭುವನೇಶ್ವರಿ ಮಾತೆ, ಚಾಮುಂಡೇಶ್ವರಿ ಮಾತೆಯನ್ನು ಒಪ್ಪಿಕೊಳ್ಳುತ್ತೇನೆ, ತಲೆಬಾಗುತ್ತೇನೆ’ ಎಂದು ಹೇಳಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸವಾಲು ಹಾಕಿದರು.

