​ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ: ಚಿರತೆ ದಾಳಿಗೆ ಮಂಡ್ಯ ಮೂಲದ ಯುವಕ ಬಲಿ

Spread the love

ಚಾಮರಾಜನಗರ: ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರೊಬ್ಬರ ಮೇಲೆ ಚಿರತೆ ದಾಳಿ ನಡೆಸಿ ಕೊಂದಿರುವ ದಾರುಣ ಘಟನೆ ಬುಧವಾರ ಮುಂಜಾನೆ ನಡೆದಿದ್ದು, ಭಕ್ತಾದಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಮೃತರನ್ನು ಮಂಡ್ಯ ಜಿಲ್ಲೆಯ ಚಿರನಹಳ್ಳಿ ಗ್ರಾಮದ ಪ್ರವೀಣ್ (30) ಎಂದು ಗುರುತಿಸಲಾಗಿದೆ.

​ಮೃತ ಪ್ರವೀಣ್ ಅವರು ಮಂಡ್ಯದ ಚಿರನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ನೂರಾರು ಸ್ನೇಹಿತರೊಂದಿಗೆ ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡಿದ್ದರು. ಮಂಗಳವಾರ ರಾತ್ರಿ ಬೆಟ್ಟದ ತಪ್ಪಲಿನ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿದ್ದ ಇವರು, ಬುಧವಾರ ಮುಂಜಾನೆ ಅಲ್ಲಿಂದ ಬೆಟ್ಟದ ಕಡೆಗೆ ಕಾಲ್ನಡಿಗೆ ಆರಂಭಿಸಿದ್ದರು. ಈ ವೇಳೆ ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಿಕರ ಮಾರ್ಗದಲ್ಲಿ ಹೊಂಚು ಹಾಕಿ ಕುಳಿತಿದ್ದ ಚಿರತೆಯು ಏಕಾಏಕಿ ಪ್ರವೀಣ್ ಅವರ ಮೇಲೆರಗಿದೆ. ಪ್ರವೀಣ್ ಅವರ ಜೊತೆಯಲ್ಲಿದ್ದ ಐವರು ಸ್ನೇಹಿತರು ಜೋರಾಗಿ ಕಿರುಚಾಡಿ ಚಿರತೆಯನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ, ಅದು ಪ್ರವೀಣ್ ಅವರನ್ನು ಅರಣ್ಯದೊಳಗೆ ಎಳೆದೊಯ್ದಿದೆ.

​ತಕ್ಷಣವೇ ಭಯಭೀತರಾದ ಸ್ನೇಹಿತರು ಮಲೆಮಹದೇಶ್ವರ ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ, ಬೆಳಗ್ಗೆ 11 ಗಂಟೆಯ ಸುಮಾರಿಗೆ ಪ್ರವೀಣ್ ಅವರ ಶವ ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ಈ ಮಾರ್ಗದ ರಸ್ತೆ ಬದಿಯಲ್ಲಿಯೇ ಚಿರತೆ ಕಾಣಿಸಿಕೊಳ್ಳುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು ಎಂಬುದು ಇಲ್ಲಿ ಉಲ್ಲೇಖನೀಯ.

ಗುಂಡ್ಲುಪೇಟೆಯಲ್ಲೂ ಚಿರತೆ ಹಾವಳಿ:

ಚಾಮರಾಜನಗರ ಜಿಲ್ಲೆಯಾದ್ಯಂತ ವನ್ಯಜೀವಿ ಸಂಘರ್ಷ ಹೆಚ್ಚುತ್ತಿದ್ದು, ಗುಂಡ್ಲುಪೇಟೆ ತಾಲೂಕಿನ ಚೆನ್ನಮಲ್ಲಿಪುರದಲ್ಲಿಯೂ ಇತ್ತೀಚೆಗೆ ಚಿರತೆಯೊಂದು ಸಾಕುನಾಯಿಯನ್ನು ಹೊತ್ತೊಯ್ದ ಘಟನೆ ವರದಿಯಾಗಿದೆ. ಗ್ರಾಮದ ರೈತ ಸುಬ್ಬಪ್ಪ ಎಂಬುವರ ಜಮೀನಿಗೆ ನುಗ್ಗಿದ ಚಿರತೆ, ಹಸುವಿನ ಮೇಲೆ ದಾಳಿಗೆ ಯತ್ನಿಸಿತ್ತು. ಹಸು ಹಾಗೂ ಅಲ್ಲಿದ್ದ ನಾಯಿ ಪ್ರತಿರೋಧ ತೋರಿದವಾದರೂ, ಅಂತಿಮವಾಗಿ ಚಿರತೆಯು ನಾಯಿಯನ್ನು ಕಚ್ಚಿಕೊಂಡು ಹೋಗಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿ ಬೊಗಳುವ ಶಬ್ದ ಕೇಳಿ ಎಚ್ಚೆತ್ತು ಬರುವಷ್ಟರಲ್ಲಿ ಚಿರತೆ ಪರಾರಿಯಾಗಿತ್ತು ಎಂದು ರೈತನ ಮಗ ಬಸವರಾಜು ತಿಳಿಸಿದ್ದು, ತೋಟಕ್ಕೆ ಹೋಗಲು ಭಯವಾಗುತ್ತಿದೆ ಎಂದು ಅರಣ್ಯಾಧಿಕಾರಿಗಳ ಬಳಿ ಅಳಲು ತೋಡಿಕೊಂಡಿದ್ದಾರೆ

ವರದಿ: ಕಾರ್ತಿಕ್ ಗೌಡ, ಹನೂರು

Leave a Reply

Your email address will not be published. Required fields are marked *