
ಕೊಪ್ಪಳ: ರಾಣೇಬೆನ್ನೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಉದ್ದೇಶದಿಂದ 46 ಎಕರೆ ಜಮೀನು ಖರೀದಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದಕ್ಕೆ ಮಂಜೂರಾತಿ ನೀಡಲು ‘ಬಲಗಡೆ ಹೂವು’ ಕೊಟ್ಟಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಶ್ರೀಗಳು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಕಾಳಿದಾಸ ಸಂಸ್ಥೆಯಲ್ಲಿ ಭಾನುವಾರ ನಡೆದ ಕುರುಬ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಎಂ ಅವರ ಈ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.
“ನಾನು ರಾಣೇಬೆನ್ನೂರಿನಲ್ಲಿ ಮೆಡಿಕಲ್ ಕಾಲೇಜು ಕಟ್ಟಬೇಕು ಎನ್ನುವ ಉದ್ದೇಶದಿಂದ 46 ಎಕರೆ ಜಮೀನು ಖರೀದಿಸಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರಿಗೂ ಈ ವಿಷಯವನ್ನು ಪದೇ ಪದೇ ಹೇಳಿದ್ದೇನೆ. ಆದರೆ, ಅವರು ನಮಗಿನ್ನೂ ಬಲಗಡೆ ಹೂವು ಕೊಟ್ಟಿಲ್ಲ” ಎಂದು ಶ್ರೀಗಳು ಹೇಳಿದರು. ಜಮೀನು ಖರೀದಿಸಿದಾಗ ಎಕರೆಗೆ 12 ಲಕ್ಷ ರೂ. ಬೆಲೆ ಇತ್ತು, ಆದರೆ ಈಗ ಅದರ ಬೆಲೆ 80 ಲಕ್ಷ ರೂ. ಆಗಿದೆ ಎಂದು ತಿಳಿಸಿದರು. “ನಾನಾ ಕಾರಣಗಳಿಂದ ಬಲಗಡೆ ಹೂ ಕೊಡುತ್ತಿಲ್ಲ” ಎಂದು ಮುಖ್ಯಮಂತ್ರಿಗಳ ವರ್ತನೆಗೆ ಅವರು ಬೇಸರ ವ್ಯಕ್ತಪಡಿಸಿದರು.
ಎಸ್‌ಟಿ ಮೀಸಲಾತಿಗೆ ‘ಕುಲಕಸಬು ಕುರಿ ಸಾಕಾಣಿಕೆ’ ಎಂದು ನಮೂದಿಸಿ
ನಂತರ ಸಮೀಕ್ಷಾ ಕಾರ್ಯದ ಕುರಿತು ಮಾತನಾಡಿದ ಶ್ರೀಗಳು, ಸಮಾಜ ಬಾಂಧವರು ಆಯೋಗ ಕೈಗೊಂಡಿರುವ ಸಮೀಕ್ಷೆಯಲ್ಲಿ ‘ಧರ್ಮ ಹಿಂದೂ’ ಮತ್ತು ‘ಜಾತಿ ಕುರುಬ’ ಎಂದು ನಮೂದಿಸಬೇಕು. ಜೊತೆಗೆ, ‘ಕುಲಕಸಬು ಕುರಿ ಸಾಕಾಣಿಕೆ’ ಎಂದು ಬರೆಯಿಸಬೇಕು. ಇದು ಸಮಾಜವನ್ನು ಎಸ್‌ಟಿಗೆ ಸೇರಿಸಲು ಅನುಕೂಲವಾಗಲಿದೆ ಎಂದು ವಿವರಿಸಿದರು.
‘ನಮ್ಮಲ್ಲಿ ಮೇಕೆ ಬೇಡ’ ಎಂದ ಶ್ರೀಗಳ ಖಾರ ಪ್ರತಿಕ್ರಿಯೆ
ಕಾರ್ಯಕ್ರಮದಲ್ಲಿ ‘ಮೇಕೆ’ ಕುರಿತು ಶ್ರೀಗಳು ನೀಡಿದ ಖಾರವಾದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. “ನಾವು ಸಾವಿರಾರು ಕುರಿಗಳನ್ನು ಸಾಕಿದರೂ ಅದರಲ್ಲಿ 20 ರಿಂದ 25 ಮೇಕೆಗಳನ್ನು ಸಾಕುತ್ತೇವೆ. ಮೇಕೆ ಅಡ್ಡಾಡಿ ಮೇಯುತ್ತದೆ. ಕುರಿ ನೆಲಕಚ್ಚಿ ಮೇಯುತ್ತದೆ. ಮೇಕೆ ನೋಡಿ ಕುರಿಗಳು ಅದರ ಹಿಂದೆ ಹೋಗುತ್ತವೆ. ನಮ್ಮಲ್ಲಿ ಮೇಕೆ ಬೇಡ, ಕುರುಬ ಸಮಾಜದಲ್ಲಿ ಮೇಕೆಗಳು ಬೇಡ. ಅಕಸ್ಮಾತ್ ಮೇಕೆ ಇದ್ದರೂ ಅದನ್ನು ಮಾಜಿ ಶಾಸಕ ಬಸವರಾಜ್ ಹಿಟ್ನಾಳ್ ಅವರಿಗೆ ಹೇಳಿ” ಎಂದು ಅವರು ಆಕ್ರೋಶದಿಂದ ಪ್ರತಿಕ್ರಿಯಿಸಿದರು.

