
ಬೆಂಗಳೂರು: ಪ್ರಸಕ್ತ ಸಾಲಿಗೆ ಮಾತ್ರ ಅನ್ವಯವಾಗುವಂತೆ, ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕೌನ್ಸಿಲಿಂಗ್ ವೇಳಾಪಟ್ಟಿ:
- ಸೆ.10-20: ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್.
- ಸೆ.23-24: ಸಾಮಾನ್ಯ ಕೋರಿಕೆ ವರ್ಗಾವಣೆ ಕೌನ್ಸಿಲಿಂಗ್.
- ಸೆ.3-8: ವಿಶೇಷ ಪ್ರಕರಣಗಳ ಮೊದಲ ಸುತ್ತಿನ ಕೌನ್ಸಿಲಿಂಗ್.
- ಸೆ.8: ವಿಶೇಷ ಪ್ರಕರಣಗಳ ಎರಡನೇ ಸುತ್ತಿನ ಕೌನ್ಸಿಲಿಂಗ್.
ಪಾರದರ್ಶಕತೆಗಾಗಿ ಆನ್‌ಲೈನ್ ವ್ಯವಸ್ಥೆ:
ಸಚಿವರು, ಈ ವರ್ಷದಿಂದಲೇ ಪಿಡಿಒ ವರ್ಗಾವಣೆ ಪ್ರಕ್ರಿಯೆಯನ್ನು ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ನಡೆಸುತ್ತಿರುವುದು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ಹೇಳಿದರು. ಈಗಾಗಲೇ ವಿಶೇಷ ಪ್ರಕರಣಗಳ ಅಡಿ 515 ಹಾಗೂ ಸಾಮಾನ್ಯ ಕೋರಿಕೆಯ ಅಡಿ 1215 ಅರ್ಜಿಗಳು ಸೇರಿ ಒಟ್ಟು 1730 ಅರ್ಜಿಗಳು ಸ್ವೀಕೃತವಾಗಿವೆ.
ಕೌನ್ಸಿಲಿಂಗ್ ನಿಯಮಗಳು:
‘ರಾಜ್ಯ ನಾಗರಿಕ ಸೇವೆಗಳು (ಹಿರಿಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ವರ್ಗಾವಣೆಗಳ ನಿಯಂತ್ರಣ) ನಿಯಮಗಳು 2024’ಕ್ಕೆ ಸೂಕ್ತ ತಿದ್ದುಪಡಿ ತಂದು ಈ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಈಗಾಗಲೇ ಗ್ರಾಮ ಪಂಚಾಯತಿ ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಸಂಬಂಧಿಸಿದಂತೆ 31 ಜಿಲ್ಲೆಗಳಲ್ಲಿ ಆನ್‌ಲೈನ್ ಕೌನ್ಸಿಲಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

