ಪಾಲಿಕೆ ಶಿಕ್ಷಕರಿಗೆ ವೇತನ ನೀಡಿ, ಸುರಂಗ ರಸ್ತೆ ಹಠ ಬಿಡಿ: ಡಿಸಿಎಂ ವಿರುದ್ಧ ಆರ್. ಅಶೋಕ ವಾಗ್ದಾಳಿ

Spread the love

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಸುರಂಗ ರಸ್ತೆ ಯೋಜನೆ ಮತ್ತು ಸರ್ಕಾರದ ಆಡಳಿತ ವೈಫಲ್ಯದ ಕುರಿತು ಮಾಜಿ ಉಪಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಶಿವಕುಮಾರ್ ಅವರು ಕನ್ನಡಿಗರಿಗೆ “ಚೊಂಬು ಕೊಟ್ಟಿದ್ದಾರೆ” ಎಂದು ಅಶೋಕ ಟೀಕಿಸಿದ್ದಾರೆ.

ಸುರಂಗ ರಸ್ತೆ, ಸ್ಕೈ ಡೆಕ್, ಬ್ರ್ಯಾಂಡ್ ಬೆಂಗಳೂರು, ಜಿಬಿಎ (ಗ್ರೇಟರ್ ಬೆಂಗಳೂರು) ಯೋಜನೆಗಳ ಕುರಿತು ಮಾತನಾಡುತ್ತಾ, ಡಿಸಿಎಂ ಅವರು “ಬರೀ ಓಳು ಬಿಟ್ಟಿದ್ದಾರೆ” ಎಂದಿರುವ ಅಶೋಕ, ಈ ಯೋಜನೆಗಳ ಅವ್ಯವಸ್ಥೆಯಿಂದಾಗಿ ಪಾಲಿಕೆಯ ಶಿಕ್ಷಕರು ಕಳೆದ ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಸುರಂಗ ರಸ್ತೆ ಯೋಜನೆಗಿಂತ ಮೊದಲು ಶಿಕ್ಷಕರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಅವರ ಸಮಸ್ಯೆ ಬಗೆಹರಿಸುವಂತೆ ಅವರು ಆಗ್ರಹಿಸಿದ್ದಾರೆ.

ಸುರಂಗ ರಸ್ತೆಯ ಹಠ ಯಾಕೆ? ಡಿಸಿಎಂ ವಿರುದ್ಧ ಪ್ರಶ್ನೆಗಳ ಸುರಿಮಳೆ

ಸುರಂಗ ರಸ್ತೆ ಯೋಜನೆಯಿಂದ ಆಗುವ ಹಾನಿಗಳ ಪಟ್ಟಿಯನ್ನು ನೀಡಿದ ಅಶೋಕ ಅವರು, ಈ ಯೋಜನೆಯ ಕುರಿತು ಡಿಸಿಎಂ ಅವರ “ಅಚಲ ಆಸಕ್ತಿ”ಯ ಹಿಂದಿನ ಉದ್ದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಅವರ ಪ್ರಕಾರ, ಸುರಂಗ ರಸ್ತೆಯಿಂದ ಜಲಮೂಲ, ಅಂತರ್ಜಲ, ಕೊಳವೆಬಾವಿಗಳಿಗೆ ಧಕ್ಕೆಯಾಗಲಿದೆ. ನಗರದ ಪರಿಸರಕ್ಕೆ ದೊಡ್ಡಮಟ್ಟದ ಪೆಟ್ಟು ಬೀಳಲಿದ್ದು, ಲಾಲ್ ಬಾಗ್, ಕಬ್ಬನ್ ಪಾರ್ಕ್‌ನಂತಹ ನಗರದ ಶ್ವಾಸಕೋಶಗಳಿಗೆ ಹಾನಿಯಾಗಲಿದೆ. ಅಲ್ಲದೆ, ಇದು ಟ್ರಾಫಿಕ್ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಷ್ಟೆಲ್ಲ ಬಾಧಕಗಳಿದ್ದರೂ ಯೋಜನೆಯನ್ನು ಮಾಡಿಯೇ ತೀರುತ್ತೇನೆ ಎನ್ನುವ ಡಿಸಿಎಂ ಅವರ ಹಠಕ್ಕೆ ಕಾರಣವೇನು ಎಂದು ಪ್ರಶ್ನಿಸಿದ ಅಶೋಕ, ಐಐಎಸ್‌ಸಿ ಅಧ್ಯಯನ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರವಾದಿಗಳು, ನಾಗರಿಕರು ವಿರೋಧ ಮಾಡುತ್ತಿದ್ದರೂ ಶಿವಕುಮಾರ್ ಅವರಿಗೆ ಸುರಂಗ ರಸ್ತೆಯ ಬಗ್ಗೆ ಅಷ್ಟು ಆಸಕ್ತಿ ಇರುವುದೇಕೆ ಎಂದು ಕೇಳಿದ್ದಾರೆ. ಅಲ್ಲದೆ, ಸುರಂಗ ರಸ್ತೆಗೂ ಅವರ ಮುಖ್ಯಮಂತ್ರಿ ಹುದ್ದೆಯ ಕನಸಿಗೂ ಸಂಬಂಧವಿದೆಯೇ, ಇದರಲ್ಲಿ ರಾಹುಲ್ ಗಾಂಧಿ ಮತ್ತು ಹೈಕಮಾಂಡ್‌ನ “ಕಮಿಷನ್ ಪಾಲೆಷ್ಟು” ಎಂದು ನೇರ ಪ್ರಶ್ನೆಗಳನ್ನು ಎಸೆದಿದ್ದಾರೆ.

“ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಹಠಕ್ಕೆ ಬೆಂಗಳೂರಿನ ಪರಿಸರಕ್ಕೆ ದೀರ್ಘಕಾಲೀನ ಅಪಾಯ ತಂದೊಡ್ಡುವ ಅವೈಜ್ಞಾನಿಕ ಯೋಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿ ಯೋಜನೆಯನ್ನು ಹೇರಿ ಬೆಂಗಳೂರಿನ ವಿಲನ್ ಆಗಬೇಡಿ” ಎಂದು ಅಶೋಕ ಅವರು ಡಿಸಿಎಂಗೆ ಎಚ್ಚರಿಕೆ ನೀಡಿದ್ದಾರೆ.

ಕಳಪೆ ಅನುದಾನ ಬಳಕೆ: ಸರ್ಕಾರದ ಆಡಳಿತ ಯಂತ್ರ ಸ್ತಬ್ಧ

ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ತಬ್ಧವಾಗಿದೆ ಎಂದು ಆರೋಪಿಸಿದ ಆರ್. ಅಶೋಕ, 2025-26ರ ಆರ್ಥಿಕ ಸಾಲಿನಲ್ಲಿ ಆರು ತಿಂಗಳು ಕಳೆದರೂ ಶೇ. 30ರಷ್ಟು ಮಾತ್ರ ಅನುದಾನ ಬಳಕೆಯಾಗಿರುವುದನ್ನು ಉಲ್ಲೇಖಿಸಿದ್ದಾರೆ. ಇದು ಸರ್ಕಾರದ ವೈಫಲ್ಯಕ್ಕೆ “ಕನ್ನಡಿ ಹಿಡಿದಿದೆ” ಎಂದಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಗಳ ಪ್ರದರ್ಶನವನ್ನು “ಅತ್ಯಂತ ಕಳಪೆ” ಎಂದು ಟೀಕಿಸಿದ ಅಶೋಕ, ಅವರು ಆರ್‌ಎಸ್‌ಎಸ್ ಜಪ, ವಿವಾದಾತ್ಮಕ ಹೇಳಿಕೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಆರ್‌ಡಿಪಿಆರ್ ಇಲಾಖೆಯಲ್ಲಿ ಕೇವಲ ಶೇ. 11.02 ಮತ್ತು ಐಟಿ-ಬಿಟಿ ಇಲಾಖೆಯಲ್ಲಿ ಕೇವಲ ಶೇ. 10.86ರಷ್ಟು ಅನುದಾನ ಬಳಕೆಯಾಗಿರುವುದು ಅವರ ಇತ್ತೀಚಿನ “ರೋಷವೇಶ”ದ ಹಿಂದಿನ “ದುರುದ್ದೇಶ”ವನ್ನು ಎತ್ತಿ ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ಮಾತನಾಡಿದ ಅಶೋಕ, “ತಮ್ಮ ಉತ್ತರಾಧಿಕಾರಿ ಯಾರು? ಅಹಿಂದ ಚಳವಳಿ ಮುನ್ನಡೆಸುವವರು ಯಾರು?” ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮೊದಲು, ಬಜೆಟ್‌ನಲ್ಲಿ ಘೋಷಣೆಯಾದ ಅನುದಾನವನ್ನು ಬಿಡುಗಡೆ ಮಾಡುವುದು ಯಾವಾಗ, ಅದನ್ನು ಜನಕಲ್ಯಾಣ ಮತ್ತು ಅಭಿವೃದ್ಧಿಗೆ ಖರ್ಚು ಮಾಡುವುದು ಯಾವಾಗ ಎಂದು ಪ್ರಶ್ನಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

“ನಿಮ್ಮಂತಹ ಅಸಮರ್ಥ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗಿರುವುದೇ ಕನ್ನಡ ನಾಡಿನ ದೊಡ್ಡ ದುರಂತ” ಎಂದು ಕಟುವಾಗಿ ಟೀಕಿಸಿದ ಅಶೋಕ, ತಕ್ಷಣ ರಾಜೀನಾಮೆ ನೀಡಿ ಕರ್ನಾಟಕವನ್ನು ಉಳಿಸಿ ಮತ್ತು ತಮ್ಮ ಅಲ್ಪ ಸ್ವಲ್ಪ ಗೌರವವನ್ನು ಉಳಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *