ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

Spread the love

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ಪವಿತ್ರಾಗೆ ಸದ್ಯಕ್ಕೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವೇ ಗತಿಯಾಗಿದೆ.
ಅದೇ ಸಮಯದಲ್ಲಿ, ಪ್ರಮುಖ ಆರೋಪಿ ನಟ ದರ್ಶನ್ ಮತ್ತು ಇತರ ನಾಲ್ವರು ಆರೋಪಿಗಳನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಪೊಲೀಸರು ಸಲ್ಲಿಸಿದ್ದ ಅರ್ಜಿಯ ಕುರಿತು ಇಂದು ನ್ಯಾಯಾಲಯ ಆದೇಶ ಹೊರಡಿಸುವ ಸಾಧ್ಯತೆ ಇದೆ. ಈ ಹಿಂದೆ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ನೀಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಸ್ಥಳಾಂತರ ಅರ್ಜಿ ಮಹತ್ವ ಪಡೆದುಕೊಂಡಿದೆ.

ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ
ಖ್ಯಾತ ವಕೀಲ ಬಾಲನ್ ಅವರು ನಟಿ ಪವಿತ್ರಾ ಗೌಡ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯವು ಈ ಮನವಿಯನ್ನು ತಿರಸ್ಕರಿಸಿದೆ. ಇದರಿಂದ ಪವಿತ್ರಾಗೆ ಜಾಮೀನು ಸಿಗುವ ನಿರೀಕ್ಷೆ ಸದ್ಯಕ್ಕೆ ದೂರವಾಗಿದೆ.
ದರ್ಶನ್ ಸ್ಥಳಾಂತರ ಅರ್ಜಿ ವಿಚಾರಣೆ
ದರ್ಶನ್ ಸೇರಿ ಐವರು ಆರೋಪಿಗಳಾದ ಜಗದೀಶ್, ಲಕ್ಷ್ಮಣ್, ನಾಗರಾಜ್, ಪ್ರದೋಶ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸುವಂತೆ ಜೈಲಾಧಿಕಾರಿಗಳು ಎಸ್‌ಪಿಪಿ (ವಿಶೇಷ ಸರ್ಕಾರಿ ಅಭಿಯೋಜಕರು) ಮೂಲಕ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಹಿಂದಿನ ಮುಖ್ಯ ಕಾರಣ, ದರ್ಶನ್ ಬೆಂಗಳೂರಿನಲ್ಲಿ ಉಳಿದುಕೊಂಡರೆ ರೌಡಿಗಳ ಸಂಪರ್ಕ ಪಡೆದು ಮತ್ತೊಮ್ಮೆ ರಾಜಾತಿಥ್ಯ ಪಡೆಯುವ ಸಾಧ್ಯತೆಯಿದೆ ಎಂಬುದು. ಈ ಹಿಂದೆ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾಗ ಅವರಿಗೆ ವಿಶೇಷ ಸವಲತ್ತುಗಳು ದೊರೆತಿದ್ದು, ಕಾಫಿ ಕುಡಿದು ಸಿಗರೇಟ್ ಸೇದುತ್ತಿರುವ ಫೋಟೋಗಳು ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿದ್ದವು. ಈ ಬಗ್ಗೆ ಸುಪ್ರೀಂ ಕೋರ್ಟ್ ಸಹ ದರ್ಶನ್‌ರನ್ನು ಸಾಮಾನ್ಯ ಕೈದಿಯಂತೆ ಪರಿಗಣಿಸಬೇಕು ಎಂದು ಸೂಚಿಸಿತ್ತು.
ಇದಕ್ಕೆ ಆಕ್ಷೇಪಣೆ ಸಲ್ಲಿಸಿರುವ ದರ್ಶನ್ ಮತ್ತು ಇತರ ಆರೋಪಿಗಳು, ಬಳ್ಳಾರಿಗೆ ಸ್ಥಳಾಂತರಗೊಂಡರೆ ತಮ್ಮ ವಕೀಲರೊಡನೆ ಸಂಪರ್ಕ ಸಾಧಿಸುವುದು ಕಷ್ಟವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಎರಡೂ ಕಕ್ಷಿಗಳ ವಾದ ಆಲಿಸಿದ ನ್ಯಾಯಾಲಯವು ಆದೇಶವನ್ನು ಕಾಯ್ದಿರಿಸಿದ್ದು, ಇಂದು ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.

ದರ್ಶನ್‌ಗೆ ಎರಡು ಬೆಡ್, ಎರಡು ದಿಂಬು?
ಇದೇ ವೇಳೆ, ದರ್ಶನ್‌ಗೆ ಜೈಲಿನಲ್ಲಿ ಎರಡು ಬೆಡ್ ಮತ್ತು ಎರಡು ದಿಂಬುಗಳನ್ನು ನೀಡುವಂತೆ ಸಲ್ಲಿಸಲಾಗಿದ್ದ ಮತ್ತೊಂದು ಅರ್ಜಿಯ ಕುರಿತು ಸಹ ಇಂದು ವಿಚಾರಣೆ ನಡೆಯಲಿದೆ. ಜೈಲಿನ ನಿಯಮಾವಳಿಗಳಲ್ಲಿ ಅವಕಾಶವಿದ್ದರೂ, ಕೇವಲ ಒಂದು ಬೆಡ್ ಮತ್ತು ಒಂದು ದಿಂಬು ನೀಡಲಾಗಿದೆ ಎಂದು ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಅರ್ಜಿಗಳ ಬಗ್ಗೆ ಇಂದು ನ್ಯಾಯಾಲಯದ ತೀರ್ಪು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *