ಕುರುಬಗಟ್ಟಿಯಲ್ಲಿ ಪೋಷಕ–ಶಿಕ್ಷಕರ ಮಹಾಸಭೆ: ವೃತ್ತಿ ಮೇಳದ ಮೂಲಕ ಗಮನ ಸೆಳೆದ ವಿದ್ಯಾರ್ಥಿಗಳು

Spread the love

ಧಾರವಾಡ: ತಾಲ್ಲೂಕಿನ ಕುರುಬಗಟ್ಟಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಪೋಷಕ-ಶಿಕ್ಷಕರ ಮಹಾಸಭೆ ಹಾಗೂ ವಿಶೇಷ ವೃತ್ತಿ ಮೇಳ ಅದ್ದೂರಿಯಾಗಿ ಜರುಗಿತು. ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಪುಂಡಲೀಕ ಗುಂಡಗೋವಿ ಅವರು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ, ಶಾಲಾ ಚಟುವಟಿಕೆಗಳಲ್ಲಿ ಪೋಷಕರ ಸಹಭಾಗಿತ್ವದ ಅಗತ್ಯವನ್ನು ಒತ್ತಿ ಹೇಳಿದರು.

​ಸಭೆಯಲ್ಲಿ ನಡೆದ ಪೋಷಕ-ಶಿಕ್ಷಕರ ಸಂವಾದದಲ್ಲಿ ಮಕ್ಕಳ ಕಲಿಕಾ ಪರಿಸರ ನಿರ್ಮಾಣ ಹಾಗೂ ಶೈಕ್ಷಣಿಕ ಪ್ರಗತಿಯ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶಿಕ್ಷಣ ಎನ್ನುವುದು ಕೇವಲ ನೌಕರಿಗಾಗಿ ಸೀಮಿತವಾಗಬಾರದು; ಅದು ಜ್ಞಾನದ ವಿಕಾಸ ಹಾಗೂ ವ್ಯಕ್ತಿತ್ವ ನಿರ್ಮಾಣದ ಅಡಿಪಾಯವಾಗಬೇಕು ಎಂಬ ಆಶಯ ವ್ಯಕ್ತವಾಯಿತು. ಪರೀಕ್ಷಾ ಸಮಯ ಹತ್ತಿರವಿರುವುದರಿಂದ ಮಕ್ಕಳು ಪರೀಕ್ಷಾ ಭಯವಿಲ್ಲದೆ ಮುಕ್ತವಾಗಿ ಪರೀಕ್ಷೆ ಎದುರಿಸುವಂತೆ ಸಿದ್ಧಗೊಳಿಸಬೇಕು. ವಿಶೇಷವಾಗಿ ಸಂಜೆ 6 ರಿಂದ ರಾತ್ರಿ 9 ಗಂಟೆಯವರೆಗೆ ಮಕ್ಕಳು ಮೊಬೈಲ್ ಹಾಗೂ ಟಿವಿಯಿಂದ ದೂರವಿದ್ದು ಓದಿನ ಕಡೆಗೆ ಗಮನಹರಿಸುವಂತೆ ಪೋಷಕರು ನಿಗಾವಹಿಸಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.

​ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಆಯೋಜಿಸಿದ್ದ ‘ವೃತ್ತಿ ಮೇಳ’ವು ಎಲ್ಲರ ಗಮನ ಸೆಳೆಯಿತು. ವಿದ್ಯಾರ್ಥಿಗಳು ವಿವಿಧ ವೃತ್ತಿನಿರತರ ವೇಷಭೂಷಣಗಳನ್ನು ಧರಿಸಿ ಮಿಂಚಿದರು. ಮಕ್ಕಳ ಚಕ್ಕಡಿ ಹಾಗೂ ಟ್ರಾಕ್ಟರ್ ಪ್ರದರ್ಶನವು ಗ್ರಾಮೀಣ ಸೊಗಡನ್ನು ಅನಾವರಣಗೊಳಿಸಿತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.

​ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಕೃಷ್ಣಾ ಅಂಗಡಿ, ಸಂತೋಷಕುಮಾರ, ಮಾಬುಬಲಿ ಮುಲ್ಲಾ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಸರಸ್ವತಿ ನಾಯಕ, ಶಿಕ್ಷಕರಾದ ಸುನಿತಾ ಗಾಡಗೋಳಿ, ಮಧುಮತಿ ಶಿವಪುರ, ಮಂಜುಳಾ ಪಿ.ಜಿ., ಸುನಿತಾ ಪಾಟೀಲ, ಪುಷ್ಪಾ ಕಂಬಾರ, ಮೇಘನಾ ಹಾಗೂ ಶಶಿಕಲಾ ಕಮ್ಮಾರ ಸೇರಿದಂತೆ ನೂರಾರು ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಉಮೇಶ ಕುದರಿ ಸ್ವಾಗತಿಸಿದರೆ, ಶ್ರೀಧರ ಗಸ್ತಿ ಕಾರ್ಯಕ್ರಮ ನಿರೂಪಿಸಿದರು. ಹೇಮಂತ ಲಮಾಣಿ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *