
ಜಲಂಧರ್: ಇಲ್ಲಿನ ಹೋಶಿಯಾರ್ಪುರ-ಜಲಂಧರ್ ರಸ್ತೆಯ ಮಂಡಿಯಾಲ ಅಡ್ಡಾ ಬಳಿ ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದು ಎಲ್ಪಿಜಿ ಟ್ಯಾಂಕರ್ ಸ್ಫೋಟಗೊಂಡಿರುವ ದುರಂತ ಘಟನೆ ತಡರಾತ್ರಿ ನಡೆದಿದೆ. ಈ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ.
ದುರಂತದಲ್ಲಿ ಮೃತಪಟ್ಟವರನ್ನು ಸುಖ್ಜೀತ್ ಸಿಂಗ್ (ಚಾಲಕ), ಬಲ್ವಂತ್ ರೈ, ಧರ್ಮೇಂದರ್ ವರ್ಮಾ, ಮಂಜಿತ್ ಸಿಂಗ್, ವಿಜಯ್, ಜಸ್ವಿಂದರ್ ಕೌರ್ ಮತ್ತು ಆರಾಧನಾ ವರ್ಮಾ ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಉಳಿದವರಾದ ಬಲ್ವಂತ್ ಸಿಂಗ್, ಹರ್ಬನ್ಸ್ ಲಾಲ್, ಅಮರಜೀತ್ ಕೌರ್, ಸುಖಜೀತ್ ಕೌರ್, ಜ್ಯೋತಿ, ಸುಮನ್, ಗುರುಮುಖ್ ಸಿಂಗ್, ಹರ್ಪ್ರೀತ್ ಕೌರ್, ಕುಸುಮಾ, ಭಗವಾನ್ ದಾಸ್, ಲಾಲಿ ವರ್ಮಾ, ಸೀತಾ, ಅಜಯ್, ಸಂಜಯ್, ರಾಘವ್ ಮತ್ತು ಪೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರತಿಭಟನೆ ಮತ್ತು ಸರ್ಕಾರದ ಭರವಸೆ:
ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಮತ್ತು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಮಂಡಿಯಾಲ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ರಸ್ತೆಯಲ್ಲಿ ಮೂರು ಗಂಟೆಗಳ ಕಾಲ ಧರಣಿ ನಡೆಸಿದರು. ಎಸ್ಡಿಎಂ ಗುರುಸಿಮ್ರನ್ಜೀತ್ ಕೌರ್ ಅವರು, ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಮತ್ತು ಹೊಣೆಗಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.
ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಸಂತಾಪ:
ಈ ಘಟನೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಹಾಗೂ ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಕೂಡ ಘಟನೆಗೆ ಸಂತಾಪ ಸೂಚಿಸಿದ್ದು,
ಅಪಘಾತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನೋವಿನ ಸಾಂತ್ವಾನ ಹೇಳಿದ್ದಾರೆ.
ಸಂಪುಟ ಸಚಿವ ಡಾ. ರವಜೋತ್ ಸಿಂಗ್, ಶಾಸಕ ಬ್ರಾಮ್ ಶಂಕರ್ ಜಿಂಪಾ, ಸಂಸದ ರಾಜ್ ಕುಮಾರ್ ಚಬ್ಬೇವಾಲ್ ಮತ್ತು ಜಿಲ್ಲಾಧಿಕಾರಿ ಆಶಿಕಾ ಜೈನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿದರು.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮೃತರ ಕುಟುಂಬಗಳಿಗೆ ಕನಿಷ್ಠ 1 ಕೋಟಿ ರೂ. ಪರಿಹಾರ ನೀಡುವಂತೆ ಮತ್ತು ಹಾನಿಗೊಳಗಾದ ಮನೆಗಳು ಹಾಗೂ ಅಂಗಡಿಗಳಿಗೆ ಸಂಪೂರ್ಣ ನಷ್ಟ ಭರಿಸುವಂತೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 105 ಮತ್ತು 324(4)ರಡಿ ಎಫ್ಐಆರ್ ದಾಖಲಾಗಿದೆ.

