ಕನ್ನಡದ ಏಕೀಕರಣಕ್ಕೆ ಶ್ರಮಿಸಿದ ಪಂ. ಚಂದ್ರಶೇಖರ ಶಾಸ್ತ್ರೀ: ಡಾ. ಜಿನದತ್ತ ಹಡಗಲಿ

Spread the love

ಧಾರವಾಡ: ಪಂ. ಚಂದ್ರಶೇಖರ ಶಾಸ್ತ್ರೀಗಳು ಸಂಸ್ಕೃತದ ಪ್ರಕಾಂಡ ಪಂಡಿತರಾಗಿದ್ದರೂ, ಕನ್ನಡ ನಾಡು-ನುಡಿಯು ಅವರ ಜೀವನದ ಉಸಿರಾಗಿತ್ತು. ಕನ್ನಡದ ಕೀರ್ತಿಯನ್ನು ಆಕಾಶದೆತ್ತರಕ್ಕೆ ಹಾರಿಸಿದ ಅವರನ್ನು ‘ವ್ಯಾಕರಣತೀರ್ಥ’ ಮತ್ತು ‘ವಿದ್ಯಾವಾರಿಧಿ’ ಎಂಬ ಬಿರುದುಗಳಿಂದ ಗೌರವಿಸಲಾಗಿತ್ತು ಎಂದು ಕ.ವಿ.ವಿ. ಜೈನ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಅಭಿಪ್ರಾಯಪಟ್ಟರು.

​ಅವರು ಶನಿವಾರದಂದು, ರಂದು ಕರ್ನಾಟಕ ವಿದ್ಯಾವರ್ಧಕ ಸಂಘವು, ವ್ಯಾಕರಣ ತೀರ್ಥ ಪಂ. ಚಂದ್ರಶೇಖರ ಶಾಸ್ತ್ರೀಗಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಚಂದ್ರಶೇಖರ ಶಾಸ್ತ್ರೀಗಳ ಬದುಕು-ಬರಹ’ ವಿಷಯ ಕುರಿತು ಮಾತನಾಡುತ್ತಿದ್ದರು.

ಬಡತನದಲ್ಲಿ ಬೆಳೆದ ಮಹಾನ್ ವಿದ್ವಾಂಸ:

ಪಂ. ಚಂದ್ರಶೇಖರ್ ಶಾಸ್ತ್ರೀಗಳ ಬಾಲ್ಯವು ಕಿತ್ತು ತಿನ್ನುವ ಬಡತನದಲ್ಲಿ ಸಾಗಿದ್ದು, ಅವರು ಕಂತಿ ಭಿಕ್ಷೆ ಮತ್ತು ಕೂಲಿ ನಾಲಿ ಮಾಡಿ ಜೀವನ ಸಾಗಿಸಿದ್ದರು. ಅವರ ಓದುವ ಆಸಕ್ತಿಯನ್ನು ಗಮನಿಸಿ ಬ್ಯಾಡಗಿ ಸಿದ್ಧಲಿಂಗಪ್ಪನವರು ಸಂಸ್ಕೃತ ಶಾಲೆಗೆ ಪ್ರವೇಶ ದೊರಕಿಸಿಕೊಟ್ಟರು. ಪ್ಲೇಗ್ ರೋಗದಿಂದಾಗಿ ಬ್ಯಾಡಗಿಯಿಂದ ಶಿರಹಟ್ಟಿ, ಗದಗ, ಹಾವೇರಿ ಮೊದಲಾದ ಸ್ಥಳಗಳಲ್ಲಿ ಸಂಸ್ಕೃತ ಅಧ್ಯಯನ ಮುಂದುವರಿಸಬೇಕಾಯಿತು. ಕಡೆಗೆ, ತಮ್ಮ ಓದಿನ ತೃಪ್ತಿಗಾಗಿ ಕಾಶಿಗೆ ತೆರಳಿ ಜಂಗಮವಾಡಿ ಮಠದಲ್ಲಿ ೭ ವರ್ಷಗಳ ಕಾಲ ಅಧ್ಯಯನದಲ್ಲಿ ನಿರತರಾದರು ಎಂದು ಡಾ. ಹಡಗಲಿ ತಿಳಿಸಿದರು.

ಸಮಗ್ರ ಕರ್ನಾಟಕದ ಕನಸುಗಾರ:

ಶಾಸ್ತ್ರೀಗಳು ಕೇವಲ ವಿದ್ವಾಂಸರಾಗಿ ಉಳಿಯದೇ, ಹರಿದು ಹಂಚಿ ಹೋಗಿದ್ದ ಕನ್ನಡದ ಪ್ರದೇಶಗಳನ್ನು ಒಗ್ಗೂಡಿಸಿ ಸಮಗ್ರ ಕರ್ನಾಟಕದ ಕನಸು ಕಂಡಿದ್ದರು. ಕರ್ನಾಟಕ ಏಕೀಕರಣವಾಗದ ಹೊರತು ಭಾರತ ಸ್ವಾತಂತ್ರ್ಯ ಪಡೆದರೂ ಅದು ಅರ್ಥಹೀನ ಎಂದು ಭಾವಿಸಿದ್ದರು. ಕನ್ನಡದ ನೆಲದಲ್ಲಿ ಕನ್ನಡಿಗರು ಅನಾಥ ಪ್ರಜ್ಞೆ ಹೊಂದಿದಾಗ, ಅವರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು. ಸಾಹಿತ್ಯಾಸಕ್ತರಾಗಿದ್ದ ಅವರು ಕನ್ನಡದಲ್ಲಿ ‘ಬಸವತತ್ವ ರತ್ನಾಕರ’ ಸೇರಿದಂತೆ ಒಟ್ಟು ೧೩ ಕೃತಿಗಳನ್ನು ರಚಿಸಿದ್ದರು. ಪತ್ರಿಕೆ ಓದುವ ಹಾಗೂ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವ ಹವ್ಯಾಸದಿಂದ ಅನೇಕ ಗ್ರಂಥಮಾಲೆಗಳನ್ನು ಸ್ಥಾಪಿಸಿದರು. ಅಲ್ಲದೆ, ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು ಎಂದು ತಿಳಿಸಿದರು.

ಭವಿಷ್ಯದ ಪೀಳಿಗೆಗೆ ಅನುಕರಣೀಯ:

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರಕಾಂತ್ ಬೆಲ್ಲದ ಮಾತನಾಡಿ, ಪಂ. ಚಂದ್ರಶೇಖರ ಶಾಸ್ತ್ರೀಗಳು ಮರೆಯಲಾರದ ಮಹಾನುಭಾವರು. ಅವರ ಜೀವನದ ಯಶೋಗಾಥೆ ಭವಿಷ್ಯದ ಪೀಳಿಗೆಗೆ ಅನುಕರಣೀಯವಾಗಿದೆ ಎಂದರು.

​ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.

​ಕಾರ್ಯಕ್ರಮದಲ್ಲಿ ವೀರಣ್ಣ ಒಡ್ಡೀನ, ಸುರೇಶ ಹಾಲಭಾವಿ, ಡಾ. ಪಾರ್ವತಿ ಹಾಲಭಾವಿ, ವ್ಹಿ. ಜಿ. ಪಾಟೀಲ, ವಸಂತ ಲೋಖಂಡೆ, ನಾಗರಾಜ ಹಂಗಳಕಿ ಸೇರಿದಂತೆ ಅನೇಕ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *