ಕುಂದಗೋಳ ಪಟ್ಟಣದ ಸ್ವಚ್ಛತೆ, ನೀರು ಮತ್ತು ಬೀದಿ ದೀಪಗಳ ಸಮಸ್ಯೆಗೆ ಸಾಮಾಜಿಕ ಜಾಲತಾಣ ಆಧಾರಿತ ಪರಿಹಾರ: ಶಾಸಕ ಎಂ.ಆರ್. ಪಾಟೀಲ್

Spread the love

ಕುಂದಗೋಳ ಪಟ್ಟಣ ಸ್ವಚ್ಛತೆ, ನೀರು ಮತ್ತು ಬೀದಿ ದೀಪಗಳ ಸಮಸ್ಯೆಗೆ ಸಾಮಾಜಿಕ ಜಾಲತಾಣ ಆಧಾರಿತ ಪರಿಹಾರ: ಶಾಸಕ ಎಂ.ಆರ್. ಪಾಟೀಲ್

ಕುಂದಗೋಳ: ಪಟ್ಟಣದಲ್ಲಿ ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಪರಿಹರಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುವ ಹೊಸ ಯೋಜನೆಯನ್ನು ಶಾಸಕ ಎಂ.ಆರ್. ಪಾಟೀಲ್ ಅವರು ಶ್ಲಾಘಿಸಿದರು.
ಅವರು ಶುಕ್ರವಾರದಂದು ಪಟ್ಟಣ ಪಂಚಾಯಿತಿ (ಪಪಂ) ಯಲ್ಲಿ “ಸ್ವಚ್ಛ ಭಾರತ ಮಿಷನ್ 2.0″ ಅಡಿಯಲ್ಲಿ ಈ ಹೊಸ ಸಾಮಾಜಿಕ ಜಾಲತಾಣ ಆಧರಿತ ಕಂಟ್ರೋಲ್ ರೂಂ ಅನ್ನು ಉದ್ಘಾಟಿಸಿ ಮಾತನಾಡಿ ಆಧುನಿಕ ತಂತ್ರಜ್ಞಾನವನ್ನು ಸ್ಥಳೀಯ ಆಡಳಿತದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ನಿರ್ಧಾರ. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ನೇರವಾಗಿ ಅಧಿಕಾರಿಗಳಿಗೆ ತಲುಪಿಸಲು ಸಾಮಾಜಿಕ ಜಾಲತಾಣಗಳನ್ನು ಬಳಸುವ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿದೆ. ಕುಂದಗೋಳವನ್ನು ಮಾದರಿ ಪಟ್ಟಣವನ್ನಾಗಿ ಮಾಡುವ ನಮ್ಮ ಪ್ರಯತ್ನದಲ್ಲಿ ಇದು ಒಂದು ಮಹತ್ವದ ಹೆಜ್ಜೆಯಾಗಿದೆ. ನಾಗರಿಕರು ಮತ್ತು ಸ್ಥಳೀಯ ಆಡಳಿತದ ನಡುವೆ ಉತ್ತಮ ಸಂವಹನ ಇರಬೇಕು. ಈ ಮೂಲಕ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಬಹುದು” ಎಂದು ಶಾಸಕರು ಹೇಳಿದರು.
ನಂತರ ಪಪಂ ಆರೋಗ್ಯ ಅಧಿಕಾರಿ ಜಾನಕಿ ಬಳ್ಳಾರಿ ಮಾತನಾಡಿ, “ಸಾರ್ವಜನಿಕರು ತಮ್ಮ ವಾರ್ಡ್‌ಗಳಲ್ಲಿನ ನೀರು, ವಿದ್ಯುತ್ ದೀಪ, ಅಥವಾ ಸ್ವಚ್ಛತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಿಯಂತ್ರಣ ಕೊಠಡಿಗೆ ತಿಳಿಸಿದರೆ, 48 ಗಂಟೆಗಳ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಲಾಗುವುದು” ಎಂದು ಭರವಸೆ ನೀಡಿದರು. ಇದಕ್ಕಾಗಿ ಮೀಸಲಿಟ್ಟ ದೂರವಾಣಿ ಸಂಖ್ಯೆ 9300 41397 ಅನ್ನು ಅವರು ಪ್ರಕಟಿಸಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಶ್ಯಾಮಸುಂದರ ದೇಸಾಯಿ, ಉಪಾಧ್ಯಕ್ಷ ಮಂಜುನಾಥ ಹಿರೇಮಠ, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಸಾಬ ಶಿರೂರ, ಪ ಪಂ ಮುಖ್ಯಾಧಿಕಾರಿ ಸಿ ವಿ ಕುಲಕರ್ಣಿ, ಸದಸ್ಯರಾದ ಮಲ್ಲಿಕಾರ್ಜುನ ಕಿರೇಸೂರ, ಗಣೇಶ ಕೋಕಾಟೆ, ಬಸಮ್ಮ ವಡಕ್ಕಣ್ಣವರ, ಹನಮಂತಪ್ಪ ರಣತೂರ, ದಿಲೀಪ ಕಲಾಲ, ಪ್ರವೀಣ ಬಡ್ನಿ, ಸುನೀತಾ ಪಾಟೀಲ, ಗಂಗಮ್ಮ ಬಂಡಿವಾಡ, ನೀಲಮ್ಮ ಕುಂದಗೋಳ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *