

ಕೊಪ್ಪಳ: ಇದುವರೆಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ₹13,000 ಕೋಟಿ ಅನುದಾನ ನೀಡಿದ್ದು ನಮ್ಮದೇ ಸರ್ಕಾರ. ಕೃಷ್ಣಾ ಮೇಲ್ದಂಡೆ ಯೋಜನೆಯಡಿ ರೈತರಿಗೆ ₹80 ಸಾವಿರ ಕೋಟಿ ಪರಿಹಾರ ನೀಡುತ್ತಿರುವುದೂ ಇದೇ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ನುಡಿದಂತೆ ನಡೆದ ಯಾವುದಾದರೂ ಸರ್ಕಾರ ಇದ್ದರೆ ಅದು ನಮ್ಮ ಕಾಂಗ್ರೆಸ್ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.
‘ಬಿಜೆಪಿಗೆ ಹೊಟ್ಟೆಕಿಚ್ಚು; ಆರ್ಥಿಕತೆಯಲ್ಲಿ ಕನ್ನಡಿಗರೇ ನಂ. 1’
ಬಿಜೆಪಿ ತನ್ನ ಅವಧಿಯಲ್ಲಿ ಒಂದೇ ಒಂದು ಮನೆಯನ್ನು ನಿರ್ಮಿಸಲಿಲ್ಲ, ಅಭಿವೃದ್ಧಿ ಕಾರ್ಯ ಮಾಡಲಿಲ್ಲ. ಈ ಕಾರಣಕ್ಕೆ ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅವರಿಗೆ ಹೊಟ್ಟೆಕಿಚ್ಚು ಬಂದಿದೆ ಎಂದು ಸಿಎಂ ಟೀಕಿಸಿದರು.
”ನಾವು ಕೇವಲ ಎರಡು ವರ್ಷದಲ್ಲಿ ₹1 ಲಕ್ಷ ಕೋಟಿ ಹಣವನ್ನು ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ಜೇಬಿಗೆ ಹಾಕಿದ್ದೇವೆ. ಇದರಿಂದ ರಾಜ್ಯದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ, ಜನರ ತಲಾ ಆದಾಯ ಹೆಚ್ಚಾಗಿದೆ. ಪರಿಣಾಮವಾಗಿ ರಾಜ್ಯದ ಆರ್ಥಿಕತೆ ಪ್ರಗತಿ ಕಂಡಿದೆ. ಈ ಬಗ್ಗೆ ಸಾಕಷ್ಟು ವರದಿಗಳು ಬಂದಿವೆ” ಎಂದು ಮುಖ್ಯಮಂತ್ರಿಗಳು ಹೇಳಿದರು.
”ತಲಾ ಆದಾಯದ ವಿಚಾರದಲ್ಲಿ ಇಡೀ ದೇಶದಲ್ಲಿ ಕನ್ನಡಿಗರೇ ನಂಬರ್ ಒನ್. ಇದು ನಮ್ಮ ಸರ್ಕಾರದ ಆರ್ಥಿಕ ಸಾಧನೆ. ತೆರಿಗೆ ಪಾವತಿಯಲ್ಲಿ ರಾಜ್ಯವು ಇಡೀ ದೇಶದಲ್ಲಿ ನಂಬರ್ ಟು ಸ್ಥಾನದಲ್ಲಿದೆ. ಇದು ನಮ್ಮ ಸರ್ಕಾರದ ಜಾತ್ಯತೀತ ಸಾಧನೆ” ಎಂದು ಹೆಮ್ಮೆ ವ್ಯಕ್ತಪಡಿಸಿದರು.
”ನಾವು ಎಲ್ಲಾ ಜಾತಿ, ಎಲ್ಲಾ ಧರ್ಮದವರ ಪ್ರಗತಿಗಾಗಿ ಯೋಜನೆ ರೂಪಿಸಿದೆವು. ಹೀಗಾಗಿ, ಎಲ್ಲಾ ಸಮುದಾಯಗಳ ಜನರು ಸೇರಿ ರಾಜ್ಯದ ಆರ್ಥಿಕತೆಯನ್ನು ಪ್ರಗತಿಗೆ ಕೊಂಡೊಯ್ದಿದ್ದಾರೆ” ಎಂದು ಸಿಎಂ ವಿವರಿಸಿದರು.
ಗ್ಯಾರಂಟಿಗಳಿಗೆ ಹಣದ ಕೊರತೆಯಿಲ್ಲ; ಕೇಂದ್ರದ ಅನ್ಯಾಯ ಖಂಡನೆ
ಕೊಪ್ಪಳ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದಾದ ಪ್ರಯೋಜನಗಳ ವಿವರ ನೀಡಿದ ಸಿಎಂ ಸಿದ್ದರಾಮಯ್ಯ, “ಜಿಲ್ಲೆಯೊಂದರಲ್ಲೇ ಮಹಿಳೆಯರು 9 ಕೋಟಿ 22 ಲಕ್ಷ ಬಾರಿ ಉಚಿತವಾಗಿ ಪ್ರಯಾಣಿಸಿದ್ದು, ಜಿಲ್ಲೆಗೆ ₹330 ಕೋಟಿ ಖರ್ಚಾಗಿದೆ. ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯಲ್ಲಿ 3,17,776 ಫಲಾನುಭವಿಗಳಿಗೆ ₹1,283 ಕೋಟಿ ವಿತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಡಿ 2,75,903 ಫಲಾನುಭವಿಗಳಿಗೆ ₹290 ಕೋಟಿ ನೀಡಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯ 1.96 ಕೋಟಿ ಜನರಿಗೆ ₹320 ಕೋಟಿ ಮೊತ್ತದ 39.097 ಮೆಟ್ರಿಕ್ ಟನ್ ದವಸಧಾನ್ಯ ವಿತರಿಸಲಾಗಿದೆ. ಬೊಕ್ಕಸ ಖಾಲಿ ಆಗಿದ್ದರೆ ಇಷ್ಟೊಂದು ಪ್ರಮಾಣದ ಹಣವನ್ನು ಜನರಿಗೆ ಕೊಡಲು ಸಾಧ್ಯವಾಗುತ್ತಿತ್ತೇ?” ಎಂದು ಪ್ರಶ್ನಿಸಿದರು.
ಜಿಎಸ್‌ಟಿ ಜಾರಿ ಮಾಡಿದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ಎಂಟು ವರ್ಷಗಳ ಕಾಲ ನಿರಂತರವಾಗಿ ರಾಜ್ಯದ ಮತ್ತು ದೇಶದ ಜನರ ಸುಲಿಗೆ ನಡೆಸಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. “ಈಗಲೂ ಕೇಂದ್ರದಿಂದ ₹15 ಸಾವಿರ ಕೋಟಿ ರೂಪಾಯಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. 15ನೇ ಹಣಕಾಸು ಆಯೋಗದಿಂದಲೂ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಬಿಜೆಪಿಯ ಸಂಸದರು ಮತ್ತು ಕೇಂದ್ರ ಮಂತ್ರಿಗಳು ಪಾರ್ಲಿಮೆಂಟಿನಲ್ಲಿ ತುಟಿ ಬಿಚ್ಚಿ ಪ್ರಶ್ನಿಸಲಿಲ್ಲ” ಎಂದು ದೂರಿದರು. ಅನ್ಯಾಯ ಸರಿ ಪಡಿಸಲು ನಾಲ್ಕು ಬಾರಿ ದೆಹಲಿಗೆ ಹೋಗಿ ಮನವಿ ಮಾಡಿದರೂ ಪ್ರಧಾನಿ ಮೋದಿ ಅಥವಾ ನಿರ್ಮಲಾ ಸೀತಾರಾಮನ್ ಯಾರೂ ಕ್ರಮ ಕೈಗೊಳ್ಳಲಿಲ್ಲ ಎಂದರು.
‘ಕೊಪ್ಪಳಕ್ಕೆ ಕಾಲಿಟ್ಟಾಗಲೆಲ್ಲಾ ಮೈಸೂರಿಗೆ ಕಾಲಿಟ್ಟಷ್ಟು ಖುಷಿ’
”ಮುಕ್ಕುಂಬಿ ಕೆರೆಗೆ ನೀರು ಹರಿಸಿದ್ದು ನಾವು. ಈಗ ಯಲಬುರ್ಗಾ ಕ್ಷೇತ್ರದ ಕೆರೆ ತುಂಬಿಸುವ ಯೋಜನೆಗೆ ₹650 ಕೋಟಿ ಹಣ ಕೊಡುತ್ತಿದ್ದೇವೆ. ಇದೂ ನಮ್ಮ- ನಿಮ್ಮ ಸರ್ಕಾರದ ಹಣ” ಎಂದು ಸಿಎಂ ಘೋಷಿಸಿದರು.
”ನಾನು ಕೊಪ್ಪಳಕ್ಕೆ ಕಾಲಿಟ್ಟಾಗಲೆಲ್ಲಾ ಮೈಸೂರಿಗೇ ಕಾಲಿಟ್ಟಷ್ಟು ಖುಷಿ ಆಗುತ್ತದೆ. ನಿಮ್ಮ ಪ್ರೀತಿಗೆ ಸದಾ ಋಣಿ. ರಾಜೀವ್ ಗಾಂಧಿ ಅವರ ಹತ್ಯೆ ಆಗದೇ ಹೋಗಿದ್ದರೆ ನಾನು ಕೊಪ್ಪಳ ಲೋಕಸಭಾ ಸದಸ್ಯ ಆಗಿರುತ್ತಿದ್ದೆ. ನಿಮ್ಮ ಪ್ರೀತಿಯ ಋಣ ನನ್ನ ಮೇಲಿದೆ. ಅರ್ಧ ಋಣ ತೀರಿಸಿದ್ದೇನೆ, ಉಳಿದ ಋಣವನ್ನೂ ತೀರಿಸ್ತೇನೆ” ಎಂದು ಭರವಸೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ₹2,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ, ವಿವಿಧ ಇಲಾಖೆಯ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

