
ಧಾರವಾಡ: ಜಿಲ್ಲೆಯ ಸಾರ್ವಜನಿಕರು ಹಾಗೂ ಗೃಹಬಳಕೆ ಅಡಿಗೆ ಅನಿಲ (ಎಲ್ಪಿಜಿ) ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು. ಜಿಲ್ಲೆಯಲ್ಲಿ ಗೃಹಬಳಕೆ ಸಿಲೆಂಡರ್ಗಳ ಸಾಕಷ್ಟು ದಾಸ್ತಾನು ಲಭ್ಯವಿದ್ದು ಯಾವುದೇ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶಾದ್ಯಂತ ಎಲ್ಪಿಜಿ ಉತ್ಪಾದನೆ ಹಾಗೂ ಬಾಟಲಿಂಗ್ ಪ್ರಮಾಣ ಹೆಚ್ಚಿರುವುದರಿಂದ ಸಿಲೆಂಡರ್ಗಳ ಸರಬರಾಜು ಸಮರ್ಪಕವಾಗಿದ್ದು ಗ್ರಾಹಕರು ಗಾಬರಿಗೊಳ್ಳುವ ಅಗತ್ಯವಿಲ್ಲ. ಹೆಚ್ಚುವರಿಯಾಗಿ ಸಿಲೆಂಡರ್ಗಳನ್ನು ಸಂಗ್ರಹಿಸಿಕೊಳ್ಳುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಮುಂಚಿತವಾಗಿ ಬುಕ್ಕಿಂಗ್ ಮಾಡುತ್ತಿರುವುದರಿಂದ ಐವಿಆರ್ಎಸ್ ಹಾಗೂ ಮಿಸ್ಡ್ ಕಾಲ್ ವ್ಯವಸ್ಥೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಕೆಲವೊಮ್ಮೆ ಸೇವೆಗಳು ಕಾರ್ಯನಿರ್ವಹಿಸುವಲ್ಲಿ ತೊಂದರೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಐಒಸಿಎಲ್, ಎಚ್ಪಿಸಿಎಲ್ ಮತ್ತು ಬಿಪಿಸಿಎಲ್ ತೈಲ ಕಂಪನಿಗಳು ಗ್ರಾಹಕರಿಗೆ ಪರ್ಯಾಯವಾಗಿ ಎಸ್ಎಂಎಸ್, ಆನ್ಲೈನ್ ಪೋರ್ಟಲ್, ವಾಟ್ಸಾಪ್, ಮೊಬೈಲ್ ಅಪ್ಲಿಕೇಶನ್ ಹಾಗೂ ಪಾವತಿ ಅಪ್ಲಿಕೇಶನ್ಗಳ ಮೂಲಕ ಸೇರಿದಂತೆ ಆರು ರೀತಿಯ ಬುಕ್ಕಿಂಗ್ ವಿಧಾನಗಳನ್ನು ಕಲ್ಪಿಸಿವೆ. ಗ್ರಾಹಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಈ ಸೌಲಭ್ಯಗಳನ್ನು ಬಳಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಒಂದು ಗೃಹಬಳಕೆ ಸಿಲೆಂಡರ್ನ್ನು ಬುಕ್ ಮಾಡಿ ಪಡೆದ ನಂತರ ಮತ್ತೊಂದು ಸಿಲೆಂಡರ್ ಬುಕ್ಕಿಂಗ್ ಮಾಡಲು 25 ದಿನಗಳ ಬಳಿಕ ಅವಕಾಶ ಇರುತ್ತದೆ ಎಂದೂ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎಲ್ಪಿಜಿ ಸಿಲೆಂಡರ್ ಕೊರತೆ ಇರುವುದಿಲ್ಲ. ಆದ್ದರಿಂದ ಸಾರ್ವಜನಿಕರು ಯಾವುದೇ ರೀತಿಯ ಭಯ ಅಥವಾ ಆತಂಕಕ್ಕೆ ಒಳಗಾಗಬಾರದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬಬಾರದು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಜಿಲ್ಲೆಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹರಿಸಿಕೊಳ್ಳಬಹುದು. ಧಾರವಾಡ ನಗರ ಪ್ರದೇಶದ ಸಹಾಯಕ ನಿರ್ದೇಶಕರು (9164603114) ಹಾಗೂ ಆಹಾರ ನಿರೀಕ್ಷಕ (8296702244), ಧಾರವಾಡ ಗ್ರಾಮೀಣದ ಆಹಾರ ಶಿರಸ್ತೇದಾರ (9845202400) ಮತ್ತು ಆಹಾರ ನಿರೀಕ್ಷಕರು (8310109795, 9844080222), ಅಳ್ನಾವರದ ಆಹಾರ ನಿರೀಕ್ಷಕ (9448221892), ಹುಬ್ಬಳ್ಳಿ ನಗರದ ಸಹಾಯಕ ನಿರ್ದೇಶಕ (9035074105) ಮತ್ತು ಆಹಾರ ನಿರೀಕ್ಷಕರು (7618760734, 9141266510, 8147744685), ಹುಬ್ಬಳ್ಳಿ ಗ್ರಾಮೀಣದ ಆಹಾರ ನಿರೀಕ್ಷಕ (9482532326), ಕಲಘಟಗಿ ತಾಲ್ಲೂಕಿನ ಆಹಾರ ನಿರೀಕ್ಷಕ (6364304842), ಕುಂದಗೋಳ ತಾಲ್ಲೂಕಿನ ಆಹಾರ ನಿರೀಕ್ಷಕ (9448324052), ಅಣ್ಣಿಗೇರಿ ತಾಲ್ಲೂಕಿನ ಆಹಾರ ಶಿರಸ್ತೇದಾರ (9620734505), ನವಲಗುಂದ ತಾಲ್ಲೂಕಿನ ಆಹಾರ ನಿರೀಕ್ಷಕ (8694971257) ಹಾಗೂ ಜಿಲ್ಲಾ ಮಟ್ಟದಲ್ಲಿ ಜಂಟಿ ನಿರ್ದೇಶಕರ ಕಚೇರಿಯ ದೂರವಾಣಿ ಸಂಖ್ಯೆ 0836-2444594 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಇದಲ್ಲದೆ ಗೃಹಬಳಕೆ ಸಿಲೆಂಡರ್ಗಳನ್ನು ವಾಣಿಜ್ಯ ಬಳಕೆಗೆ ಬಳಸಬಾರದು. ಸಿಲೆಂಡರ್ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಒಂದು ಸಿಲೆಂಡರ್ನಿಂದ ಮತ್ತೊಂದಕ್ಕೆ ಅನಿಲ ವರ್ಗಾಯಿಸುವುದು ಎಲ್ಪಿಜಿ ಸರಬರಾಜು ಮತ್ತು ವಿತರಣೆ ನಿಯಂತ್ರಣ ಆದೇಶ 2000ರನ್ವಯ ಅಪರಾಧವಾಗಿದೆ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಿಸಿದ ಆಹಾರ ನಿರೀಕ್ಷಕರಿಗೆ ತಕ್ಷಣ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

