
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಯ ಬಹುದಿನಗಳ ಬೇಡಿಕೆಯಾಗಿದ್ದ ಹೊಸ ‘ಪೀಕ್ ಕ್ಯಾಪ್’ ಅನ್ನು ಅಧಿಕೃತವಾಗಿ ವಿತರಿಸಲಾಗಿದ್ದು, ಹಳೆಯ ‘ಸ್ಲೋಚ್ ಹ್ಯಾಟ್’ಗೆ ವಿದಾಯ ಹೇಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಸಚಿವರಾದ ಡಾ. ಜಿ. ಪರಮೇಶ್ವರ್ ಅವರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದರು.
ನಗರದಲ್ಲಿ ಮಂಗಳವಾದಂದು ನಡೆದ ಪೀಕ್ ಕ್ಯಾಪ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಮತ್ತು ‘ಸನ್ಮಿತ್ರ’ ಕೈಪಿಡಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಳೆಯ ಸ್ಲೋಚ್ ಕ್ಯಾಪ್‌ಗಳು ಪ್ರತಿಭಟನೆ, ಆರೋಪಿಗಳನ್ನು ಬೆನ್ನಟ್ಟುವಾಗ ಮತ್ತು ಲಾಠಿ ಪ್ರಹಾರದ ಸಂದರ್ಭಗಳಲ್ಲಿ ಸುಲಭವಾಗಿ ಕೆಳಗೆ ಬೀಳುತ್ತಿದ್ದವು. ಪೊಲೀಸರ ಸಮವಸ್ತ್ರಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಕ್ಯಾಪ್ ಕೆಳಗೆ ಬೀಳುವುದು ಸೂಕ್ತವಲ್ಲ. ಹೀಗಾಗಿ, ಕಳೆದ ನಾಲ್ಕು ದಶಕಗಳಿಂದ ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು.
ಪೊಲೀಸ್ ಇಲಾಖೆಯ ಈ ಬೇಡಿಕೆಯನ್ನು ಪರಿಗಣಿಸಿದ ಸರ್ಕಾರವು ಹೊಸ ಮಾದರಿಯ ಕಡು ನೀಲಿ ಬಣ್ಣದ ಪೀಕ್ ಕ್ಯಾಪ್‌ಗಳನ್ನು ವಿತರಿಸಲು ಒಪ್ಪಿಗೆ ನೀಡಿದೆ. ಈ ಹೊಸ ಪೀಕ್ ಕ್ಯಾಪ್‌ಗಳು ಎಲಾಸ್ಟಿಕ್ ಹೊಂದಿದ್ದು, ಪೊಲೀಸರ ತಲೆಗೆ ಸರಿಯಾಗಿ ಕೂರಲಿವೆ. ಇಂದಿನಿಂದ ರಾಜ್ಯದ ಸುಮಾರು 1 ಲಕ್ಷ ಪೊಲೀಸ್ ಸಿಬ್ಬಂದಿಗೆ ಹೊಸ ಪೀಕ್ ಕ್ಯಾಪ್‌ಗಳನ್ನು ವಿತರಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಈ ಬದಲಾವಣೆಯು ಪೊಲೀಸ್ ಸಿಬ್ಬಂದಿಯ ಕಾರ್ಯಕ್ಷಮತೆ ಮತ್ತು ಸಮವಸ್ತ್ರದ ಗೌರವವನ್ನು ಹೆಚ್ಚಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

