
ಹೊಸದಿಲ್ಲಿ: ಆನ್‌ಲೈನ್ ಗೇಮಿಂಗ್ ವ್ಯಸನ ಮತ್ತು ಬೆಟ್ಟಿಂಗ್ ಹಾವಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಠಿಣ ಕಾನೂನನ್ನು ಜಾರಿ ಮಾಡಿದೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದ್ದು, ಇದರ ಅನ್ವಯ ಹಣ ಪಣಕ್ಕಿಟ್ಟು ಆಡುವ ಆಟಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ಕಾನೂನು, ವಿಶೇಷವಾಗಿ ಯುವಪೀಳಿಗೆಗೆ ದೊಡ್ಡ ಸಮಸ್ಯೆಯಾಗಿದ್ದ ಆನ್‌ಲೈನ್ ಜೂಜಾಟವನ್ನು ನಿಯಂತ್ರಿಸುವ ಗುರಿ ಹೊಂದಿದೆ.
ಆಟಗಾರಗಿಂತ ಮೊದಲು ಆಡಿಸುವವರಿಗೆ ಜೈಲು!
ಈ ಹೊಸ ಕಾನೂನಿನ ಅನ್ವಯ, ಆನ್‌ಲೈನ್ ಗೇಮ್ ಆಡುವವರಿಗೆ ಯಾವುದೇ ಶಿಕ್ಷೆ ಇರುವುದಿಲ್ಲ. ಆದರೆ, ನೈಜ ಹಣ ಪಣಕ್ಕಿಟ್ಟು ಆಡುವ ಆಟಗಳನ್ನು ಆಯೋಜಿಸುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ಈ ಮಸೂದೆಯು ಇ-ಸ್ಪೋರ್ಟ್ಸ್‌ಗಳನ್ನು ಹೊರತುಪಡಿಸಿ, ಆನ್‌ಲೈನ್ ಹಣದ ಆಟಗಳಿಗೆ ಸಂಬಂಧಿಸಿದ ಎಲ್ಲಾ ಜಾಹೀರಾತುಗಳನ್ನೂ ನಿಷೇಧಿಸುತ್ತದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಅಂತಹ ಆಟಗಳಿಗೆ ಹಣ ವರ್ಗಾಯಿಸುವುದನ್ನು ನಿರ್ಬಂಧಿಸಲಾಗಿದೆ.
ಏನು ಶಿಕ್ಷೆ?
- ಗೇಮಿಂಗ್ ಸೇವೆ ಒದಗಿಸುವವರಿಗೆ: 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂ.ವರೆಗೆ ದಂಡ.
- ಜಾಹೀರಾತು ನೀಡಿದರೆ: 2 ವರ್ಷಗಳವರೆಗೆ ಜೈಲು ಮತ್ತು 50 ಲಕ್ಷ ರೂ. ದಂಡ.
- ಹಣಕಾಸು ವಹಿವಾಟಿಗೆ ಸಹಕರಿಸಿದರೆ: 3 ವರ್ಷಗಳವರೆಗೆ ಜೈಲು ಮತ್ತು 1 ಕೋಟಿ ರೂ.ವರೆಗೆ ದಂಡ.
- ಅಪರಾಧ ಮರುಕಳಿಸಿದರೆ: ಜೈಲು ಶಿಕ್ಷೆ 5 ವರ್ಷಗಳವರೆಗೆ ವಿಸ್ತರಣೆ ಮತ್ತು 2 ಕೋಟಿ ರೂ.ವರೆಗೆ ದಂಡ. ಈ ಅಪರಾಧಗಳು ಜಾಮೀನು ರಹಿತವಾಗಿರುತ್ತವೆ.
ವರ್ಷಕ್ಕೆ 20,000 ಕೋಟಿ ರೂ. ನಷ್ಟ!
ಕೇಂದ್ರ ಸರ್ಕಾರದ ಅಂದಾಜಿನ ಪ್ರಕಾರ, ಆನ್‌ಲೈನ್‌ನಲ್ಲಿ ಹಣ ಪಣಕ್ಕಿಟ್ಟು ಆಡುವ ಆಟಗಳಲ್ಲಿ ಪ್ರತಿ ವರ್ಷ ಸುಮಾರು 45 ಕೋಟಿ ಜನರು ಪಾಲ್ಗೊಳ್ಳುತ್ತಿದ್ದು, ಅಂದಾಜು 20,000 ಕೋಟಿ ರೂ.ಗಳಷ್ಟು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಹಣವನ್ನು ತೊಡಗಿಸಿ ಆಡುವ ಈ ಆಟಗಳು ಸಮಾಜಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆಟಗಳಿಂದ ಬರುವ ಆದಾಯವನ್ನು ಬಿಟ್ಟುಕೊಟ್ಟು, ಜನರ ಒಳಿತಿಗೆ ಆದ್ಯತೆ ನೀಡುವುದು ಈ ಹೊಸ ಕಾನೂನಿನ ಮುಖ್ಯ ಉದ್ದೇಶವಾಗಿದೆ.
ಈ ಹೊಸ ಕಾನೂನು ಆನ್‌ಲೈನ್ ಫ್ಯಾಂಟಸಿ ಕ್ರೀಡೆಗಳು, ಪೋಕರ್, ರಮ್ಮಿ, ಇತರ ಕಾರ್ಡ್ ಗೇಮ್‌ಗಳು, ಮತ್ತು ಆನ್‌ಲೈನ್ ಲಾಟರಿಗಳನ್ನು ಒಳಗೊಂಡಿದೆ. ಆದರೆ ಇ-ಸ್ಪೋರ್ಟ್ಸ್‌ಗಳು ಈ ನಿಷೇಧದಿಂದ ಹೊರಗುಳಿದಿವೆ. ಯಾವುದೇ ಆಟ ಹಣ ಪಣಕ್ಕಿಡುವ ಆಟವೇ ಎಂಬುದನ್ನು ನಿರ್ಧರಿಸಲು ಸರ್ಕಾರ ಒಂದು ಪ್ರಾಧಿಕಾರವನ್ನು ರಚಿಸಲಿದೆ. ಇದರಿಂದ, ಬೆಟ್ಟಿಂಗ್ ಮತ್ತು ಜೂಜಿನ ಚಟುವಟಿಕೆಗಳು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ಬರಲಿವೆ.

