ಗಣತಿ ಕಾರ್ಯ ನಿರ್ಲಕ್ಷ್ಯ: ಹು-ಧಾ ಪಾಲಿಕೆಯ ಇಬ್ಬರು ಸಿಬ್ಬಂದಿ ಅಮಾನತು

Spread the love

ಹುಬ್ಬಳ್ಳಿ-ಧಾರವಾಡ: ಮಹಾನಗರ ಪಾಲಿಕೆ (ಎಚ್‌ಡಿಎಂಸಿ) ವ್ಯಾಪ್ತಿಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ಕಾರ್ಯದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ತೋರಿದ ಇಬ್ಬರು ಪಾಲಿಕೆ ಸಿಬ್ಬಂದಿಯನ್ನು ಆಯುಕ್ತ ಡಾ. ರುದ್ರೇಶ್‌ ಗಾಲಿ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಸೋಮವಾರ ಸಂಜೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಣತಿ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದ ಆಯುಕ್ತರಿಗೆ, ಈ ಇಬ್ಬರು ನೌಕರರು ವಹಿಸಿದ ಸಮೀಕ್ಷಾ ಕೆಲಸದಲ್ಲಿ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಕಂಡುಬಂದಿದೆ. ಹೀಗಾಗಿ, ಡಾ. ಗಾಲಿ ಅವರು ಕೂಡಲೇ ಅವರನ್ನು ಅಮಾನತುಗೊಳಿಸಲು ನಿರ್ದೇಶಿಸಿದರು.

ಸಭೆಯಲ್ಲಿ ಮಾತನಾಡಿದ ಅವರು, ಸಮೀಕ್ಷೆಗಾಗಿ ನೇಮಕಗೊಂಡ ಎಲ್ಲಾ ಗಣತಿದಾರರಿಗೆ ಈಗಾಗಲೇ ಅಗತ್ಯ ತರಬೇತಿ, ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಗಳನ್ನು ನೀಡಲಾಗಿದೆ. ಯಾವುದೇ ಅಧಿಕಾರಿ ಅಥವಾ ಸಿಬ್ಬಂದಿ ನಿರ್ಲಕ್ಷ್ಯ, ಅಸಡ್ಡೆ ಅಥವಾ ಕರ್ತವ್ಯಲೋಪ ಪ್ರದರ್ಶಿಸಿದರೆ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಮತ್ತು ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರವು ನಿಗದಿಪಡಿಸಿದ ಅವಧಿಯೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ, ಎಲ್ಲಾ ಸಿಬ್ಬಂದಿ ತಮ್ಮ ಕೆಲಸದಲ್ಲಿ ಶ್ರದ್ಧೆ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದು ಡಾ. ಗಾಲಿ ಒತ್ತಿ ಹೇಳಿದರು.

ಪ್ರತಿ ಗಣತಿದಾರರಿಗೆ ನಿಗದಿಪಡಿಸಿದ ಗುರಿಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು ಎಂದು ಅವರು ಸೂಚಿಸಿದರು. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾದರೆ, ತ್ವರಿತ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿಯನ್ನು ಸಂಪರ್ಕಿಸಬಹುದು ಎಂದು ಆಯುಕ್ತರು ತಿಳಿಸಿದರು.

Leave a Reply

Your email address will not be published. Required fields are marked *