
ಹುಬ್ಬಳ್ಳಿ: ಸುಕ್ಷೇತ್ರ ರಾಯನಾಳದ ಶ್ರೀ ಗುರು ರೇವಣಸಿದ್ದೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಲೋಕ ಕಲ್ಯಾಣಾರ್ಥವಾಗಿ ಅಕ್ಟೋಬರ್ 2ರವರೆಗೆ ನವರಾತ್ರಿ ಉತ್ಸವ ನಡೆಯಲಿದೆ ಎಂದು ಮಠದ ಪೀಠಾಧಿಪತಿ ಶ್ರೀ ಅಭಿನವ ರೇವಣಸಿದ್ದೇಶ್ವರ ಮಹಾಸ್ವಾಮಿಗಳು ಪ್ರಕಟಿಸಿದ್ದಾರೆ.
ಮಠದ ಶ್ರೀಗಳು ದೇಶದ ಶಾಂತಿ, ನೆಮ್ಮದಿ, ಸಮೃದ್ಧಿ, ರೈತರು ಹಾಗೂ ಯೋಧರ ಶ್ರೇಯೋಭಿವೃದ್ಧಿಗಾಗಿ ಮತ್ತು ಸಮಸ್ತ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ 9 ದಿನಗಳ ಕಾಲ ಮೌನಾನುಷ್ಠಾನ, ಉಪವಾಸ ಹಾಗೂ ಪೂಜಾನುಷ್ಠಾನ ಕೈಗೊಂಡಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯವೂ ಗುರು ರೇವಣಸಿದ್ದೇಶ್ವರರ ಕರ್ತೃ ಗದ್ದಿಗೆಗೆ ಮಹಾರುದ್ರಾಭಿಷೇಕ, ವಿಶೇಷ ಅಲಂಕಾರ, ದೇವಿಗೆ ತ್ರಿಕಾಲ ಪೂಜೆ, ಹೋಮ, ದುರ್ಗಾ ಸಹಸ್ರನಾಮಾವಳಿ, ಕುಂಕುಮಾರ್ಚನೆ, ನವಗ್ರಹ ಪೂಜೆ ಹಾಗೂ ಮೃತ್ಯುಂಜಯ ಜಪಗಳು ನಡೆಯಲಿವೆ.
ಕಾರ್ಯಕ್ರಮಗಳ ವಿವರ
ಸೆಪ್ಟೆಂಬರ್ 22ರಂದು ಬೆಳಗ್ಗೆ 4.30ರ ಶುಭ ಮುಹೂರ್ತದಲ್ಲಿ ಗಂಗಾ ಪೂಜೆ, ದುರ್ಗಾ ಕಳಶ ಸ್ಥಾಪನೆ ಹಾಗೂ ದುರ್ಗಾದೇವಿ ಪ್ರತಿಷ್ಠಾಪನೆಯೊಂದಿಗೆ ನವರಾತ್ರಿ ಉತ್ಸವ ಆರಂಭವಾಗಲಿದೆ. ಪ್ರತಿನಿತ್ಯವೂ ಗೋಪೂಜೆ, ಅಶ್ವಪೂಜೆ, ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 7 ರಿಂದ 9ರವರೆಗೆ ದೇವಿ ಪುರಾಣ ಪ್ರವಚನ ಏರ್ಪಡಿಸಲಾಗಿದೆ.
ವಿಶೇಷ ಪೂಜಾ ಕೈಂಕರ್ಯಗಳು
ಸೆ. 22: ಗಣಪತಿ ಹೋಮ, ನವಗ್ರಹ ಹೋಮದೊಂದಿಗೆ ನವರಾತ್ರಿ ಪ್ರಾರಂಭ.
ಸೆ. 23: ಧ್ಯಾನ ಸಿದ್ಧಿ ಹಾಗೂ ಕಾರ್ಯಸಿದ್ಧಿಗಾಗಿ ಶ್ರೀ ಧನ್ವಂತರಿ ಹೋಮ, ಬ್ರಹ್ಮಚರ್ಯ ಸೂಕ್ತ ಹೋಮ.
ಸೆ. 24: ಉದ್ಯೋಗ ಪ್ರಾಪ್ತಿಗಾಗಿ ಗಣಹೋಮ, ಸುದರ್ಶನ ಹೋಮ.
ಸೆ. 25: ದೃಷ್ಟಿದೋಷ ಹಾಗೂ ಕರ್ಮ ಪರಿಹಾರಕ್ಕಾಗಿ ದತ್ತಾತ್ರೇಯ ಹೋಮ, ವಿಜಯ ದುರ್ಗಾ ಹೋಮ.
ಸೆ. 26: ಸಂತಾನ ಪ್ರಾಪ್ತಿಗಾಗಿ ಶುಕ್ರ ಶಾಂತಿ ಹೋಮ, ಸಂತಾನ ಗೋಪಾಲಕೃಷ್ಣ ಹೋಮ.
ಸೆ. 27: ದುರ್ಗಾ ಹೋಮ, ಶ್ರೀ ಸೂಕ್ತ ಹೋಮ, ಅನ್ನಪೂರ್ಣೇಶ್ವರಿ ಹೋಮ.
ಸೆ. 28: ಗುರುಬಲ ಹಾಗೂ ಸಮೃದ್ಧಿಗಾಗಿ ಶ್ರೀ ಗಾಯತ್ರಿ ಹೋಮ, ಪವಮಾನ ಹೋಮ, ರುದ್ರ ಹೋಮ.
ಸೆ. 29: ಶತ್ರು ಮತ್ತು ದೃಷ್ಟಿಬಾಧೆ ನಿವಾರಣೆಗಾಗಿ ಮಹಾ ಮೃತ್ಯುಂಜಯ ಹೋಮ ಹಾಗೂ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗಾಗಿ ಸಾಮೂಹಿಕ ಸರಸ್ವತಿ ಹೋಮ.
ಸೆ. 30: ದುರ್ಗಾಷ್ಟಮಿ ಪ್ರಯುಕ್ತ ವಿವಾಹ ಮತ್ತು ಇಷ್ಟಾರ್ಥ ಸಿದ್ಧಿಗಾಗಿ ಪ್ರತ್ಯಂಗಿರಾ ದೇವಿ ಹೋಮ, ಶ್ರೀ ಪಾರ್ವತಿದೇವಿ ಸ್ವಯಂವರ.
ಅ. 1: ಮಹಾನವಮಿ, ಆಯುಧ ಪೂಜೆ, ಧನ ಪ್ರಾಪ್ತಿಗಾಗಿ ಧನಲಕ್ಷ್ಮಿ ಹೋಮ.
ಅ. 2: ವಿಜಯದಶಮಿ, ದುರ್ಗಾದೇವಿ ಮೆರವಣಿಗೆ, ಬನ್ನಿ ಪೂಜೆ, ಭೂ ವರಾಹ ಹೋಮ ಹಾಗೂ ಬೆಳಗ್ಗೆ 11 ಗಂಟೆಗೆ ಮಹಾ ಪೂರ್ಣಾಹುತಿಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ.
ಕಾರ್ಯಕ್ರಮಕ್ಕೆ ಆಗಮಿಸುವಂತೆ ರಾಯನಾಳ ಗ್ರಾಮದ ಹಾಗೂ ಮಠದ ಸಮಸ್ತ ಭಕ್ತರು ಮನವಿ ಮಾಡಿದ್ದಾರೆ.

