
ಕೊಪ್ಪಳ: ದಕ್ಷಿಣದ ಕುಂಭಮೇಳ ಎಂದೇ ಪ್ರಸಿದ್ಧವಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಠದ ಮಹಾ ಜಾತ್ರಾ ಮಹೋತ್ಸವದ ಅಂಗವಾಗಿ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ವಿವಿಧ ಗಣ್ಯರು ಹಾಗೂ ಮುಖಂಡರು ಮಠಕ್ಕೆ ಭೇಟಿ ನೀಡಿ ಗವಿಸಿದ್ದೇಶ್ವರ ಶ್ರೀಗಳ ದರ್ಶನಾಶೀರ್ವಾದ ಪಡೆದರು. ನವಲಗುಂದ ತಾಲ್ಲೂಕಿನ ಅಡ್ನೂರ ಗ್ರಾಮದವರಾದ ಉಚ್ಚ ನ್ಯಾಯಾಲಯದ ಖ್ಯಾತ ನ್ಯಾಯವಾದಿ ಸಿ. ಎಸ್. ಪಾಟೀಲ ಅವರ ನೇತೃತ್ವದಲ್ಲಿ ತೆರಳಿದ್ದ ಮುಖಂಡರ ತಂಡವು, ಶ್ರೀಮಠದ ಧಾರ್ಮಿಕ ವಿಧಿವಿಧಾನಗಳಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ನಾಡಿನ ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರನ್ನು ಮುಖಂಡರು ಭೇಟಿಯಾದರು. ಕರ್ನಾಟಕದ ಮೊದಲ ಮಹಿಳಾ ಹೃದ್ರೋಗ ತಜ್ಞೆ ಹಾಗೂ ದಕ್ಷಿಣ ಭಾರತದ ಮೊದಲ ಮಕ್ಕಳ ಹೃದ್ರೋಗ ತಜ್ಞೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡಾ. ವಿಜಯಲಕ್ಷ್ಮಿ ಅವರ ಮಾನವೀಯ ಗುಣಗಳು ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಯನ್ನು ಶ್ಲಾಘಿಸಿದ ಮುಖಂಡರು, ಅವರೊಂದಿಗೆ ಉಭಯ ಕುಶಲೋಪರಿ ವಿಚಾರಿಸಿ ಕೆಲಕಾಲ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ ಮಜ್ಜಿಗುಡ್ಡ, ನಿಂಗಪ್ಪ ಬಾರಕೇರ, ಮೌಲಸಾಬ ವೈದ್ಯ, ಬಾಬಾಜಾನ ಮುಲ್ಲಾ, ಚರಂತಯ್ಯ ಹಿರೇಮಠ, ರಾಜಶೇಖರ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಶ್ರೀಮಠದ ದಾಸೋಹ ಹಾಗೂ ಜಾತ್ರೆಯ ಶಿಸ್ತುಬದ್ಧ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

