ನವಲಗುಂದ: ಮುಂಬರುವ ಚುನಾವಣೆಗಳನ್ನು ಒಗ್ಗಟ್ಟಿನಿಂದ ಎದುರಿಸಲು ಮಾಜಿ ಸಚಿವ ಕೆ.ಎನ್. ಗಡ್ಡಿ ಕರೆ

Spread the love

ನವಲಗುಂದ: ಮುಂಬರುವ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಪುರಸಭೆ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ, ಪಕ್ಷದ ಸಂಘಟನೆಗಾಗಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಕೆ.ಎನ್. ಗಡ್ಡಿ ಅವರು ಕರೆ ನೀಡಿದರು. ಪಟ್ಟಣದ ಪ್ರಿಯಾಂಕಾ ಶಾಲೆ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ರಜತ್ ಮಹೋತ್ಸವದ ಪೂರ್ವಭಾವಿ ಸಭೆ ಹಾಗೂ ನೂತನ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಕ್ಷದ ತತ್ವ-ಸಿದ್ಧಾಂತಗಳನ್ನು ಮನೆಮನೆಗೆ ತಲುಪಿಸುವ ಮೂಲಕ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದರೆ ಚುನಾವಣೆಗಳಲ್ಲಿ ಯಶಸ್ಸು ಸಾಧಿಸುವುದು ಸುಲಭ ಎಂದರು.

​ಇದೇ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ, ಈ ತಿಂಗಳ 27ರಂದು ವಿಜಯಪುರದಲ್ಲಿ ಜರುಗಲಿರುವ ಪಕ್ಷದ ರಜತ್ ಮಹೋತ್ಸವ ಸಮಾವೇಶಕ್ಕೆ ಜಿಲ್ಲೆಯಿಂದ ಸುಮಾರು 2000ಕ್ಕೂ ಅಧಿಕ ಕಾರ್ಯಕರ್ತರು 25ಕ್ಕೂ ಹೆಚ್ಚು ಬಸ್‌ಗಳಲ್ಲಿ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ, ಶಿವಶಂಕರ ಕಲ್ಲೂರ ಅವರಿಗೆ ವಿಧಾನಪರಿಷತ್ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಲಾಗಿದ್ದು, ಸಕಾರಾತ್ಮಕ ಸ್ಪಂದನೆ ಸಿಗುವ ಆಶಾಭಾವನೆ ಇದೆ ಎಂದರು. ಹೈಕೋರ್ಟ್ ನ್ಯಾಯವಾದಿ ಸಿ.ಎಸ್. ಪಾಟೀಲ ಅವರು ಮಾತನಾಡಿ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷದ ಕೈ ಬಲಪಡಿಸೋಣ ಎಂದು ಕರೆ ನೀಡಿದರು.

​ಕಾರ್ಯಕ್ರಮದಲ್ಲಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾಗಿ ಶ್ರೀಶೈಲ ಮೂಲಿಮನಿ, ತಾಲ್ಲೂಕು ಅಧ್ಯಕ್ಷರಾಗಿ ಫಕ್ಕಿರಗೌಡ ದೊಡಮನಿ ಹಾಗೂ ಅಣ್ಣಿಗೇರಿ ಭಾಗದ ವಿವಿಧ ಘಟಕಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಪ್ರತಿ ನೀಡಲಾಯಿತು. ಇದೇ ವೇಳೆ ಬಿಜೆಪಿ ತೊರೆದು ಮರಳಿ ಜೆಡಿಎಸ್ ಸೇರಿದ ಅಬ್ಬಾಸ ದೇವರಿಡು ಅವರನ್ನು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರನ್ನಾಗಿ ಹಾಗೂ ಮೈಲಾರೆಪ್ಪ ವೈದ್ಯ ಅವರಿಗೆ ಸಂಘಟನಾ ಜವಾಬ್ದಾರಿ ಹಸ್ತಾಂತರಿಸಲಾಯಿತು. ನೇಮಕಾತಿ ಸ್ವೀಕರಿಸಿ ಮಾತನಾಡಿದ ಅಬ್ಬಾಸ ದೇವರಿಡು, ಎಚ್.ಡಿ. ಕುಮಾರಸ್ವಾಮಿಯವರು ನವಲಗುಂದ ಶಾದಿ ಮಹಲ್‌ಗೆ ನೀಡಿದ 55 ಲಕ್ಷ ರೂ. ಅನುದಾನವನ್ನು ಸಮಾಜ ಎಂದಿಗೂ ಮರೆಯುವುದಿಲ್ಲ ಎಂದು ಸ್ಮರಿಸಿದರು.

ಸಭೆಯಲ್ಲಿ ಶಿವಶಂಕರ ಕಲ್ಲೂರ, ಮೌಲಾಸಾಬ ವೈದ್ಯ, ಪ್ರಕಾಶ ಅಂಗಡಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *