
ರಕ್ತ ಚಂದ್ರಗ್ರಹಣಕ್ಕೆ ದೇಶಾದ್ಯಂತ ಸಜ್ಜು – 82 ನಿಮಿಷಗಳ ಸುದೀರ್ಘ ಗ್ರಹಣ ವೀಕ್ಷಣೆಗೆ ಉತ್ಸಾಹ
ನವದೆಹಲಿ, ಸೆ.07 – ಇಂದು ರಾತ್ರಿ ಆಕಾಶದಲ್ಲಿ ಅಪರೂಪದ ದೃಶ್ಯ ಕಣ್ತುಂಬಿಕೊಳ್ಳಲಿದೆ. ‘ಬ್ಲಡ್ ಮೂನ್’ ಎಂದೇ ಕರೆಯಲ್ಪಡುವ ರಕ್ತ ಚಂದ್ರಗ್ರಹಣವನ್ನು ಭಾರತದೆಲ್ಲೆಡೆ ಜನತೆ ವೀಕ್ಷಿಸಬಹುದಾಗಿದೆ. ರಾಹುಗ್ರಸ್ತ ಈ ಗ್ರಹಣವು ರಾತ್ರಿ 8.58ಕ್ಕೆ ಆರಂಭಗೊಂಡು, ರಾತ್ರಿ 11.01ರಿಂದ ಸಂಪೂರ್ಣ ಗ್ರಹಣ ಸಂಭವಿಸಿ, ಮಧ್ಯರಾತ್ರಿ 12.22ರವರೆಗೆ ಮುಂದುವರಿಯಲಿದೆ. ಒಟ್ಟಾರೆ 82 ನಿಮಿಷಗಳ ಕಾಲ ಈ ಅಪರೂಪದ ದರ್ಶನ ಕಾಣಿಸಲಿದೆ.
ವಿಜ್ಞಾನಿಗಳ ಪ್ರಕಾರ, ಈ ದಶಕದ ಅತೀ ಸುದೀರ್ಘ ಚಂದ್ರಗ್ರಹಣ ಇದೇ ಆಗಿದೆ. ಪ್ರಪಂಚದ ಶೇಕಡಾ 88ರಷ್ಟು ಭಾಗದಲ್ಲಿ ಇದನ್ನು ವೀಕ್ಷಿಸಬಹುದಾಗಿದೆ. ಬೆಂಗಳೂರಿನಿಂದ ಮುಂಬೈ, ದೆಹಲಿ, ಕೋಲ್ಕತಾ, ಚೆನ್ನೈ ಸೇರಿದಂತೆ ಭಾರತದೆಲ್ಲೆಡೆ ಬರಿಗಣ್ಣಿನಿಂದಲೂ ಗ್ರಹಣವನ್ನು ವೀಕ್ಷಿಸಲು ಸಾಧ್ಯ. ಆದರೆ ಟೆಲಿಸ್ಕೋಪ್ ಮೂಲಕ ನೋಡಿದರೆ ಇನ್ನಷ್ಟು ಸ್ಪಷ್ಟವಾಗಿ ಕಣ್ತುಂಬಿಕೊಳ್ಳಬಹುದಾಗಿದೆ.
ಬೆಂಗಳೂರಿನಲ್ಲಿ ವಿಶೇಷ ವ್ಯವಸ್ಥೆ
ಜವಾಹರಲಾಲ್ ನೆಹರು ತಾರಾಲಯದಲ್ಲಿ ಸಾರ್ವಜನಿಕ ವೀಕ್ಷಣೆಗೆ ಸಕಲ ಸಿದ್ಧತೆ ಮಾಡಲಾಗಿದೆ. ರಾತ್ರಿ 8 ಗಂಟೆಯಿಂದ ಬೆಳಗಿನ 2 ಗಂಟೆಯವರೆಗೆ ಜನತೆಗೆ ಉಚಿತ ವೀಕ್ಷಣೆಯ ವ್ಯವಸ್ಥೆ ಕಲ್ಪಿಸಲಾಗಿದೆ. 6 ಟೆಲಿಸ್ಕೋಪ್ಗಳು ಹಾಗೂ ಒಂದು LCD ಪರದೆ ವ್ಯವಸ್ಥೆಯೊಂದಿಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 8.30ರಿಂದ 9.30ರವರೆಗೆ ಚಂದ್ರಗ್ರಹಣ ಕುರಿತ ಉಪನ್ಯಾಸ ಕಾರ್ಯಕ್ರಮವೂ ಆಯೋಜಿಸಲಾಗಿದೆ.
ನಂಬಿಕೆ ಮತ್ತು ವೈಜ್ಞಾನಿಕ ದೃಷ್ಟಿ
ಭಾರತೀಯ ನಂಬಿಕೆ ಪ್ರಕಾರ, ಗ್ರಹಣ ಕಾಲವು ಶುಭಘಳಿಗೆ ಅಲ್ಲ ಎಂದು ಪರಿಗಣಿಸಲಾಗುತ್ತದೆ. ಧ್ಯಾನ, ಜಪದಲ್ಲಿ ಸಮಯ ಕಳೆಯುವಂತೆ ಸೂಚಿಸಲಾಗುತ್ತದೆ. ಪರಿಸರದಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗಬಹುದು ಎಂಬ ಅಭಿಪ್ರಾಯವಿದೆ. ಆದರೆ ವಿಜ್ಞಾನಿಗಳು ಇದನ್ನು ಅದ್ಭುತವಾದ ಖಗೋಳೀಯ ಕೌತುಕವೆಂದು ಪರಿಗಣಿಸಿ ವೀಕ್ಷಿಸಲು ಎಲ್ಲರಿಗೂ ಕರೆ ನೀಡಿದ್ದಾರೆ.

