

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಅಂಗವಾಗಿ, ‘ನಶೆಮುಕ್ತ ಭಾರತ’ ನಿರ್ಮಾಣದ ಸಂಕಲ್ಪದೊಂದಿಗೆ ಹುಬ್ಬಳ್ಳಿಯಲ್ಲಿ ನಡೆದ ‘ನಮೋ ಯುವ ಓಟ’ ಕಾರ್ಯಕ್ರಮದಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಅವರು ಪಾಲ್ಗೊಂಡು ಯುವಕರಿಗೆ ಮಾದಕ ವ್ಯಸನದಿಂದ ದೂರವಿರಲು ಕರೆ ನೀಡಿದರು. ಹುಬ್ಬಳ್ಳಿ-ಧಾರವಾಡ ಮಹಾನಗರ ಬಿಜೆಪಿ ಯುವ ಮೋರ್ಚಾ ವತಿಯಿಂದ ಆಯೋಜಿಸಲಾಗಿದ್ದ ಈ ಮ್ಯಾರಥಾನ್ನಲ್ಲಿ ಸಹಸ್ರಾರು ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.
ಸಾವಿರಾರು ಯುವಕರನ್ನು ಉದ್ದೇಶಿಸಿ ಮಾತನಾಡಿದ ಸಚಿವ ಜೋಶಿ, “ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ‘ಸ್ವಸ್ಥ ವ್ಯಕ್ತಿ, ಸ್ವಸ್ಥ ಪರಿವಾರ ಮತ್ತು ಸ್ವಸ್ಥ ಸಮಾಜ’ ನಿರ್ಮಾಣವು ಹೊಸ ಭಾರತವನ್ನು ಶ್ರೇಷ್ಠ ಭಾರತವನ್ನಾಗಿ ಮಾಡುವ ಮಾರ್ಗವಾಗಿದೆ. ಮಾದಕ ವ್ಯಸನಗಳು ಯುವಶಕ್ತಿಯನ್ನು ದುರ್ಬಲಗೊಳಿಸುತ್ತವೆ. ಯುವಕರು ದೈಹಿಕವಾಗಿ ಸದೃಢರಾಗಿರುವುದರ ಜೊತೆಗೆ ಈ ಪಿಡುಗಿನಿಂದ ಸಂಪೂರ್ಣವಾಗಿ ದೂರವಿರಬೇಕು” ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕನ್ನಡ ನಟಿ ಹರ್ಷಿಕಾ ಪೂಣಚ್ಚ ಮತ್ತು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಹ ಉಪಸ್ಥಿತರಿದ್ದರು.
ದೇಶದ 75 ನಗರಗಳಲ್ಲಿ ನಡೆದ ‘ನಮೋ ಯುವ ರನ್’ ಮ್ಯಾರಾಥಾನ್ನ ಯಶಸ್ವಿ ಭಾಗವಾಗಿ ಹುಬ್ಬಳ್ಳಿಯಲ್ಲಿ ನಡೆದ ಈ ಓಟ ಗಮನ ಸೆಳೆಯಿತು. ಯುವಕರು ಮಾದಕ ವಸ್ತುಗಳಿಂದ ದೂರವಿರಲು ಮತ್ತು ದೈಹಿಕ ಕ್ಷಮತೆಯನ್ನು ಗಳಿಸಲು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮೇಯರ್ ಜ್ಯೋತಿ ಪಾಟೀಲ್, ಉಪ ಮೇಯರ್ ಸಂತೋಷ ಚವ್ಹಾಣ್, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೀತಂ ಅರಕೇರಿ, ಪಕ್ಷದ ಪಾಲಿಕೆ ಸದಸ್ಯರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಚಿವರು ಮತ್ತು ಇತರೆ ಗಣ್ಯರು ಭಾಗವಹಿಸಿದ ಯುವಕರನ್ನು ಅಭಿನಂದಿಸಿ, ಅವರ ಈ ಹೆಜ್ಜೆ ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು.

