


ವಿಜಯಪುರ/ ಮೈಸೂರು: ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರನ್ನು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮೈಸೂರು-ಕೊಡಗು ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯತ್ನಾಳ್ ಹೇಳಿದ್ದೇನು?
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿ, “ನಾನು ವೈಯಕ್ತಿಕವಾಗಿ ಬಾನು ಮುಷ್ತಾಕ್ ಅವರನ್ನು ಲೇಖಕಿ ಹಾಗೂ ಹೋರಾಟಗಾರ್ತಿಯಾಗಿ ಗೌರವಿಸುತ್ತೇನೆ. ಆದರೆ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವ ಮೂಲಕ ದಸರಾ ಉದ್ಘಾಟಿಸುವುದು ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.
ಇಸ್ಲಾಂ ಧರ್ಮವು ಮೂರ್ತಿ ಪೂಜೆಯನ್ನು ವಿರೋಧಿಸುತ್ತದೆ ಎಂಬ ನಂಬಿಕೆಯಲ್ಲಿ ಅವರು ಇನ್ನೂ ಇದ್ದಾರೆಯೇ ಅಥವಾ ಎಲ್ಲಾ ಮಾರ್ಗಗಳು ಒಂದೇ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಅವರು ನಂಬುತ್ತಾರೆಯೇ ಎಂಬುದರ ಬಗ್ಗೆ ಬಾನು ಮುಷ್ತಾಕ್ ಅವರು ಸ್ಪಷ್ಟನೆ ನೀಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ. ಬಾನು ಅವರನ್ನು ಸಾಹಿತ್ಯ ಕಾರ್ಯಕ್ರಮಗಳ ಉದ್ಘಾಟನೆಗೆ ಕರೆಯುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರತಾಪ್ ಸಿಂಹ ಪ್ರಶ್ನೆಗಳು:
ಮಾಜಿ ಸಂಸದ ಪ್ರತಾಪ್ ಸಿಂಹ ಭಾನುವಾರ ಈ ಕುರಿತು ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಧಾರ್ಮಿಕ ನಂಬಿಕೆ ವಿರೋಧಿಗಳನ್ನೇ ಏಕೆ ದಸರಾ ಉದ್ಘಾಟನೆಗೆ ಆಹ್ವಾನಿಸುತ್ತಿದ್ದಾರೆ? ಇದು ಮೈಸೂರು ಮಹಾರಾಜರ ಪರಂಪರೆಯನ್ನು ಹಾಳು ಮಾಡುವ ಪ್ರಯತ್ನವಾಗಿದೆ” ಎಂದು ಟೀಕಿಸಿದ್ದಾರೆ.
“ದಸರಾ ಜಾತ್ಯತೀತತೆಯ ಪ್ರತೀಕ ಅಲ್ಲ, ಇದು ಧಾರ್ಮಿಕ ಆಚರಣೆ. ಪ್ರಶಸ್ತಿ ಬಂದವರೆಲ್ಲರನ್ನು ದಸರಾ ಉದ್ಘಾಟನೆಗೆ ಕರೆಯಲು ಆಗುತ್ತಾ? ಬಾನು ಮುಷ್ತಾಕ್ ಬಗ್ಗೆ ನಮಗೆ ಗೌರವವಿದೆ, ಆದರೆ ಇದು ಶೇ.100ರಷ್ಟು ಧಾರ್ಮಿಕ ಹಬ್ಬ. ಚಾಮುಂಡಿ ಪೂಜೆ ಸಲ್ಲಿಸಿ ಚಾಲನೆ ನೀಡಲಾಗುತ್ತದೆ. ಬಾನು ಅವರಿಗೆ ಚಾಮುಂಡಿ ಮೇಲೆ ನಂಬಿಕೆ ಇದೆಯೇ? ಅವರು ತಾನು ಚಾಮುಂಡಿ ಭಕ್ತೆ ಎಂದು ಹೇಳಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಕಾಂತಾರ’ ಚಿತ್ರದ ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರಿಗೂ ಪ್ರಶಸ್ತಿ ಬಂದಿದೆ, ಅವರನ್ನು ಏಕೆ ಕರೆಯುತ್ತಿಲ್ಲ? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು. ಅಲ್ಲದೆ, ಬನಶಂಕರಿ ದೇವಸ್ಥಾನದಲ್ಲಿ ದೀಪ ಹಚ್ಚುವುದಿಲ್ಲ ಎಂದು ಬರಗೂರು ರಾಮಚಂದ್ರಪ್ಪ ಹೇಳಿದ್ದನ್ನು ಉಲ್ಲೇಖಿಸಿ, “ಇದು ದಸರಾ ಮಹೋತ್ಸವಕ್ಕೆ ಮಾಡಿದ ಅಪಮಾನವಲ್ಲವೇ?” ಎಂದು ಕೇಳಿದರು.
ಧಾರ್ಮಿಕ ಆಚರಣೆಯಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಹೇಗೆ ಸೂಕ್ತ ವ್ಯಕ್ತಿ ಆಗುತ್ತಾರೆ ಎಂಬುದೇ ನನ್ನ ಪ್ರಶ್ನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಅವರನ್ನು ಮಾಡಿದರೆ ಯಾರ ತಕಾರರೂ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

