
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಅಮಾನವೀಯ ಹಾಗೂ ಭೀಭತ್ಸ ಘಟನೆ ಒಂದು ಬೆಳಕಿಗೆ ಬಂದಿದೆ. ಅಸಹಾಯಕ ಮಹಿಳೆಯೊಬ್ಬಳ ಮೇಲೆ ಇಬ್ಬರು ನರಾಧಮರು ಸಾಮೂಹಿಕ ಅತ್ಯಾಚಾರ ಎಸಗಿ, ಆ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಘೋರ ಪ್ರಕರಣ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಶಿವಶಂಕರ ಕಾಲೋನಿಯ ನಿವಾಸಿಗಳಾದ ಶಿವಾನಂದ್ (29) ಹಾಗೂ ಗಣೇಶ್ ಗಿಡ್ಡಣ್ಣವರ (31) ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಮೂಲದ ಸಂತ್ರಸ್ತ ಮಹಿಳೆ ಕಳೆದ ಕೆಲ ದಿನಗಳಿಂದ ಹುಬ್ಬಳ್ಳಿ ನಗರದ ವಿವಿಧ ಪ್ರದೇಶಗಳಲ್ಲಿ ಅಲೆದಾಡುತ್ತಿದ್ದಳು ಎನ್ನಲಾಗಿದೆ. ಆಕೆಯ ಅಸಹಾಯಕ ಸ್ಥಿತಿಯನ್ನು ಗಮನಿಸಿದ ಆರೋಪಿಗಳು, ಅದನ್ನು ದುರುಪಯೋಗಪಡಿಸಿಕೊಂಡು ಏಕಾಂತ ಸ್ಥಳಕ್ಕೆ ಕರೆದೊಯ್ದು ಈ ಅಮಾನುಷ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕೃತ್ಯದ ವಿಕೃತತೆಯು ಇಲ್ಲಿ ಅಂತ್ಯವಾಗದೆ, ಆರೋಪಿಗಳು ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ, ಬಟ್ಟೆ ಬಿಚ್ಚಿಸಿ, ಆ ಅಸಹ್ಯ ದೃಶ್ಯಗಳನ್ನು ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಇದರಿಂದ ರೋಸಿ ಹೋದ ಸ್ಥಳೀಯರು ಆರೋಪಿಗಳನ್ನು ಪತ್ತೆಹಚ್ಚಿ, ಅವರ ತಲೆ ಬೋಳಿಸಿ, ಸ್ಥಳದಲ್ಲೇ ಧರ್ಮದೇಟು ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಇಡೀ ಘಟನೆ ಸಮಾಜ ತಲೆತಗ್ಗಿಸುವಂತಹದ್ದಾಗಿದೆ. ಮಹಿಳೆಯ ಮೇಲೆ ನಡೆದ ಅಮಾನುಷ ವರ್ತನೆ ಒಂದು ಕಡೆ ಕಳವಳ ಉಂಟುಮಾಡಿದರೆ, ಇನ್ನೊಂದು ಕಡೆ ಕಾನೂನು ಕೈಗೆತ್ತಿಕೊಂಡು ಆರೋಪಿಗಳನ್ನು ಹಲ್ಲೆ ಮಾಡಿದ ಘಟನೆ ಕೂಡ ಚರ್ಚೆಗೆ ಗ್ರಾಸವಾಗಿದೆ. ಆದರೆ ಇಂತಹ ಗಂಭೀರ ಪ್ರಕರಣದ ಬಗ್ಗೆ ಸತ್ಯಾಸತ್ಯತೆಯನ್ನು ಜನರ ಮುಂದೆ ಪೋಲಿಸ್ ಇಲಾಖೆ ಇಟ್ಟಿದೆ. ಎಂದು ಹೇಳಲಾಗುತ್ತಿದೆ. ಆದರೆ ಬಂಧನದ ಬಳಿಕ ಆರೋಪಿಗಳ ವಿರುದ್ಧ ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಸದ್ಯ ಸಂತ್ರಸ್ತ ಮಹಿಳೆಯ ದೂರಿನ ಮೇರೆಗೆ ಹಳೆ ಹುಬ್ಬಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. “ನಗರದಲ್ಲಿ ಇಂತಹ ವಿಕೃತ ಘಟನೆಗಳು ನಡೆಯುತ್ತಿರುವುದು ಅತ್ಯಂತ ಆತಂಕಕಾರಿ ವಿಷಯ. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು,” ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ನಾಗರಿಕ ಸಮಾಜದಲ್ಲಿ ಇಂತಹ ಅಮಾನುಷ ಘಟನೆಗಳು ನಡೆಯುತ್ತಿರುವುದು ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಕಾಮುಕರ ವಿಕೃತಿ ಒಂದೆಡೆ ಇದ್ದರೆ, ಕಾನೂನು ಕೈಗೆತ್ತಿಕೊಂಡ ಜನರ ಅನಾಗರಿಕತೆ ಮತ್ತೊಂದು ಕಡೆ ಕಾಣಿಸುತ್ತಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಮತ್ತು ಸಾಮಾಜಿಕ ಜಾಗೃತಿ ಅಗತ್ಯವಾಗಿದೆ.

